

ಧಾರವಾಡ: ದೇಶಾದ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಕರೊನಾ ನಿಯಂತ್ರಣಕ್ಕೆ ಕೆಮ್ಮು, ನೆಗಡಿ, ತೀವ್ರ ಜ್ವರ (ಐಎಲ್ಐ) ಮತ್ತು ತೀವ್ರ ಉಸಿರಾಟದ ತೊಂದರೆ (ಎಸ್ಎಆರ್ಐ) ಲಕ್ಷಣಗಳಿರುವ ಎಲ್ಲರನ್ನೂ ಕಡ್ಡಾಯವಾಗಿ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸುವುದು ಅಗತ್ಯ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ದಾಖಲಾಗುವ ಈ ಪ್ರಕರಣಗಳನ್ನು ಶೇ. 100ರಷ್ಟು ತ್ವರಿತವಾಗಿ ತಪಾಸಣೆಗೊಳಪಡಿಸಬೇಕು. ಅಗತ್ಯ ವಾಹನ ಮತ್ತು ಇತರ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರೊನಾ ಹರಡುವಿಕೆ ನಿಯಂತ್ರಿಸಲು ತ್ವರಿತ ತಪಾಸಣೆ ಅತಿ ಮುಖ್ಯ. ಜಿಲ್ಲೆಯ ಸರ್ಕಾರಿ ಮತ್ತು ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳಲ್ಲಿ ಪ್ರತಿದಿನ ವರದಿಯಾಗುವ ಐಎಲ್ಐ ಹಾಗೂ ಎಸ್ಎಆರ್ಐ ಪ್ರಕರಣಗಳು ಪೋರ್ಟಲ್ನಲ್ಲಿ ದಾಖಲಾದ ಕೂಡಲೆ ಆ ವ್ಯಕ್ತಿಗಳನ್ನು ಸಂರ್ಪಸಿ ಸಮೀಪದ ಮೂಗು ಮತ್ತು ಗಂಟಲ ದ್ರವ ಸಂಗ್ರಹಣೆ ಕೇಂದ್ರದಲ್ಲಿ ಮಾದರಿ ಪಡೆಯಬೇಕು ಎಂದರು.
ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಕಿಮ್ಸ್ನ ಡಾ. ಲಕ್ಷ್ಮೀಕಾಂತ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಕೆ. ಮಾನಕರ, ಡಾ. ಸುಜಾತಾ ಹಸವೀಮಠ, ಡಾ. ಶಶಿ ಪಾಟೀಲ, ಡಾ. ಎಸ್.ಎಂ. ಹೊನಕೇರಿ, ಡಾ. ತನುಜಾ, ಡಾ. ಶಶಿಕಲಾ ನಿಂಬಣ್ಣವರ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೂಲ ಸೌಕರ್ಯಗಳ ಮಾಹಿತಿ: ನೂತನ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹೊಸದಾಗಿ ನಿರ್ವಣಗೊಳ್ಳುತ್ತಿರುವ 100 ಹಾಸಿಗೆಗಳ ಸಾಮರ್ಥ್ಯದ ನವಜಾತ ಶಿಶುಗಳ ಆಸ್ಪತ್ರೆ ಹಾಗೂ 115 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆಯ ತಜ್ಞವೈದ್ಯರು, ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ, ಕೆ.ಎಚ್.ಎಸ್. ಆರ್ಡಿಪಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್, ಇತರರಿದ್ದರು.