

ಗೋಣಿಕೊಪ್ಪ: ಉತ್ತರಾಖಂಡದ ಮುಸ್ಸೂರಿ ಲಾಲ್ ಬಹೂದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ 2022ನೇ ಬ್ಯಾಚ್ ಐಎಎಸ್ ಶಿಬಿರಾರ್ಥಿಗಳಿಗೆ ಇತ್ತೀಚೆಗೆ ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮೇಂಗಡ ಗಣೇಶ್ ತಿಮ್ಮಯ್ಯ ಸಮಗ್ರ ಕೃಷಿ ಬಗ್ಗೆ ತರಬೇತಿ ನೀಡಿದರು.
ಕೃಷಿ ಉಳಿಯಲು ಹೈನುಗಾರಿಕೆ ಮತ್ತು ಜೇನು ಕೃಷಿ ಮುಖ್ಯ. ಕಾಫಿ ಬೆಳೆ ಮತ್ತು ಏಲಕ್ಕಿ ಬೆಳೆಗಳಲ್ಲಿ ಹೂ, ಫಸಲು ಪಡೆಯಲು ಜೇನು ನೊಣಗಳ ಪರಾಗಸ್ಪರ್ಶ ಸಹಕಾರಿ. ಈ ನಿಟ್ಟಿನಲ್ಲಿ ಜೇನು ಸಾಕಣೆಗೆ ಒತ್ತು ನೀಡಬೇಕಿದೆ. ಮಣ್ಣಿನ ರಕ್ಷಣೆ, ಅರಣ್ಯ ಕೃಷಿ, ಬಿದಿರು, ತರಕಾರಿ, ಹಣ್ಣು, ಕಾಡುಮರಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು. ಮಣ್ಣಿನ ರಕ್ಷಣೆಗೆ ಆಮ್ಲೀಯತೆ ಕಾಪಾಡಿಕೊಳ್ಳಬೇಕು. ಹಾಗಾಗಿ ನೈಸರ್ಗಿಕ ಕೃಷಿ, ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ಗಣೇಶ್ ತಿಮ್ಮಯ್ಯ ಸಲಹೆ ನೀಡಿದರು.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಸುಮಾರು 400 ಶಿಬಿರಾರ್ಥಿಗಳು ಇದ್ದರು. ಇವರೊಂದಿಗೆ ಗಣೇಶ್ ತಿಮ್ಮಯ್ಯ ಅವರ ಪುತ್ರಿ ನಿಖಿತಾ ತಿಮ್ಮಯ್ಯ, ಶಿಬಿರದ ಉಪ ನಿರ್ದೇಶಕ ಅಭಿರಾಮ್ ಜಿ.ಶಂಕರ್ ಇದ್ದರು.