

ಕಲಬುರಗಿ: ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ಆ್ಯಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರ್ಸ (ಐಇಟಿಇ) ಆಡಳಿತ ಮಂಡಳಿ ಸದಸ್ಯರಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿಯ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಪ್ರೊ.ಬಸವರಾಜ ಗಾದಗೆ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಏಳು ಸ್ಥಾನಗಳಿಗೆ ಚುನಾವಣೆಗೆ 39 ಅಭ್ಯರ್ಥಿಗಳು ಕಣದಲ್ಲಿದ್ದರು. ಕರೊನಾ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಮತದಾನ ನಡೆದಿತ್ತು. 1953ರಲ್ಲಿ ಸ್ಥಾಪನೆಯಾಗಿರುವ ಐಇಟಿಇ ಸಂಸ್ಥೆಗೆ ದೇಶದೆಲ್ಲೆಡೆ 1.25 ಲಕ್ಷ ಸದಸ್ಯರಿದ್ದಾರೆ. 64 ಕೇಂದ್ರಗಳನ್ನು ಹೊಂದಿದೆ.
ಐಇಟಿಇ ಸಂಸ್ಥೆಯ ಮೂಲಕ ದೇಶದಾದ್ಯಂತ ಹಲವಾರು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಸದಸ್ಯರುಗಳ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ. ಕಲ್ಯಾಣ ಕರ್ನಾ ಟಕದ ಕಲಬುರಗಿಯಲ್ಲಿರುವ ಸಂಸ್ಥೆಯ ಉಪ ಕೇಂದ್ರವಾಗಿದೆ. ಹೈದರಾಬಾದ್ನಲ್ಲಿರುವ ಕೇಂದ್ರದ ಭಾಗವಾಗಿದೆ. ಉಪ ಕೇಂದ್ರವೊಂದರಿಂದ ಸ್ಪರ್ಧಿಸಿ ಆಯ್ಕೆಯಾದ ಏಕೈಕ ವ್ಯಕ್ತಿ ಪ್ರೊ.ಬಸವರಾಜ ಗಾದಗೆ ಅವರಾಗಿದ್ದಾರೆ.
ಐಇಟಿಇ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾಗಿದ್ದು ಖುಷಿ ತರಿಸಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಪ್ರಚುರಪಡಿಸುವುದರ ಜತೆಗೆ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು. ನೂತನ ಸದಸ್ಯರಾಗಿ ಆಯ್ಕೆಗೊಂಡ ಗಾದಗೆ ಅವರನ್ನು ನಗರದ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಿದರು.