ಐಆರ್‌ಎಸ್ ಅಧಿಕಾರಿ ಮನೆಯಲ್ಲಿ ಕಳ್ಳತನ

09arsph1ep
Published on

ಅರಸೀಕೆರೆ: ಮಾರುತಿನಗರ ಬಡಾವಣೆಗೆ ಹೊಂದಿಕೊಂಡಂತಿರುವ ಐಆರ್‌ಎಸ್ ಅಧಿಕಾರಿ ದರ್ಶನ್ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಕಳ್ಳತನ ನಡೆದಿದೆ.


ಮಹಡಿ ಮನೆಯ ಮೇಲಿನ ಬಾಗಿಲನ್ನು ಕಬ್ಬಿಣದ ರಾಡ್‌ನಿಂದ ಒಡೆದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ 68 ಗ್ರಾಂ ತೂಕದ ಚಿನ್ನಾಭರಣ, ಬೆಳ್ಳಿಯ ಪದಾರ್ಥಗಳು ಹಾಗೂ 20 ಸಾವಿರ ರೂ.ನಗದು ದೋಚಿ ಪರಾರಿಯಾಗಿದ್ದಾರೆ. ದರ್ಶನ್ ಅವರು ಕರ್ತವ್ಯ ನಿಮಿತ್ತ ಹಾಸನಕ್ಕೆ ತೆರಳಿದ್ದರೆ, ತಂದೆ ಗಂಗಾಧರಪ್ಪ ಹಾಗೂ ಕುಟುಂಬದ ಸದಸ್ಯರು ಕೃಷಿ ಚಟುವಟಿಕೆ ನಿಮಿತ್ತ ಸ್ವಗ್ರಾಮ ಹರಳಕಟ್ಟಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಹಾಡಹಗಲೇ ಚಿನ್ನಾಭರಣ, ನಗದು ಕಳವು ಮಾಡಿರುವುದು ಬಡಾವಣೆಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ನಗರ ಠಾಣೆಯ ಪೊಲೀಸರು ಎಸ್‌ಪಿ ಹರಿರಾಂ ಶಂಕರ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ರಾತ್ರಿಯೇ ಬೆರಳಚ್ಚು ಹಾಗೂ ಶ್ವಾನದಳದೊಂದಿಗೆ ಆಗಮಿಸಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಐಆರ್‌ಎಸ್ ಅಧಿಕಾರಿ ದರ್ಶನ್ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಕಳ್ಳತನ ನಡೆದಿದ್ದು ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net