

ಮೈಸೂರು: ಪೆನ್‌ನಿಂದ 700 ಪ್ರಸಿದ್ಧ ವಿಜ್ಞಾನಿಗಳ ಭಾವಚಿತ್ರ ರಚಿಸುವ ಮೂಲಕ ದಾಖಲೆ ಬರೆದಿರುವ ಕಲಾವಿದ ಯು.ಜಿ.ಮೋಹನ್‌ಕುಮಾರ್ ಆರಾಧ್ಯ ಅವರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕೇವಲ ಪೇಪರ್ ಮತ್ತು ಬಾಲ್ ಪಾಯಿಂಟ್ ಪೆನ್ ಮೂಲಕ ವಿಜ್ಞಾನಿಗಳ ಚಿತ್ರ ರಚಿಸಿರುವ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತಂಡ ವಿವಿಧ ಆಯಾಮಗಳಲ್ಲಿ ಸುದೀರ್ಘ ದಾಖಲೆ ಪರಿಶೀಲಿಸಿ ಅಂತಿಮವಾಗಿ ಜೂನ್ 15ರಂದು ಆರಾಧ್ಯ ಅವರ ಹೆಸರು ಸೇರ್ಪಡೆ ಮಾಡಿದೆ.
‘ಈಗಾಗಲೇ 2021ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ್ದು, 1 ಸಾವಿರ ವಿಜ್ಞಾನಿಗಳ ಭಾವಚಿತ್ರ ರಚಿಸುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದ್ದೇನೆ. ಈ ಕುರಿತು ಪ್ರಕ್ರಿಯೆ ನಡೆಯುತ್ತಿದೆ’ ಎಂದು ಕಲಾವಿದ ಯು.ಜಿ.ಮೋಹನ್‌ಕುಮಾರ್ ಆರಾಧ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2014ರಲ್ಲಿ ಬಾಲ್ ಪಾಯಿಂಟ್ ಪೆನ್ ಮೂಲಕ ಚಿತ್ರರಚನೆ ಪ್ರಾರಂಭಿಸಿದೆ. ವಿಜ್ಞಾನಿಗಳ ಚಿತ್ರ ಹಾಗೂ ಅವರ ಪರಿಚಯದ ಕಿರು ಟಿಪ್ಪಣಿಯೊಂದಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವ್ಯಾಟ್ಸ್‌ಆ್ಯಪ್ ಮೂಲಕ ಕಳುಹಿಸುತ್ತಿದ್ದೆ. ನನ್ನ ಆಸಕ್ತಿ ಗಮನಿಸಿದ ಮೈಸೂರು ಸೈನ್ಸ್ ಫೌಂಡೇಷನ್ ಈ ಕಲೆಯಲ್ಲಿ ದಾಖಲೆ ನಿರ್ಮಿಸಬೇಕು. ಅದಕ್ಕಾಗಿ ಸಂಬಂಧಪಟ್ಟ ಸಂಸ್ಥೆಗೆ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಿದ್ದರು. ಅದರ ಫಲವಾಗಿ ಈ ಗೌರವ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಮೈಸೂರು ಸೈನ್ಸ್ ಫೌಂಡೇಷನ್ ಅಧ್ಯಕ್ಷ ಸಿ.ಕೃಷ್ಣೇಗೌಡ ಮಾತನಾಡಿ, ಮೋಹನ್‌ಕುಮಾರ್ ಆರಾಧ್ಯ ಅವರು ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಉಣ್ಣೇನಹಳ್ಳಿಯವರು. ಪ್ರಸ್ತುತ ಮೈಸೂರು ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ವಿಜ್ಞಾನಿಗಳ ವೈಜ್ಞಾನಿಕ ಅನ್ವೇಷಣೆಯನ್ನು ಚಿತ್ರಲೇಖನದ ಮೂಲಕ ಜನರು ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು 5-6 ವರ್ಷಗಳಿಂದ ನಿರಂತವಾಗಿ ಮಾಡುತ್ತಿದ್ದಾರೆ. ನಿತ್ಯವೂ ಒಬ್ಬ ವಿಜ್ಞಾನಿಯ ಚಿತ್ರ ಬರೆದು ಅವರ ಸಂಶೋಧನೆಯ ಕಿರು ಟಿಪ್ಪಣಿಯನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದ್ದಾರೆ. ಇವರು ಬರೆದ ‘ರೇಖಾಚಿತ್ರದಲ್ಲಿ ವಿಶ್ವವಿಖ್ಯಾತ ವಿಜ್ಞಾನಿಗಳು’ ಪುಸ್ತಕ ಬೆಂಗಳೂರು ಕೇಂದ್ರ ಗ್ರಂಥಾಲಯಕ್ಕೆ ಆಯ್ಕೆಯಾಗಿದೆ ಎಂದು ಮಾಹಿತಿ ನೀಡಿದರು.
ಫೌಂಡೇಷನ್ ಪದಾಧಿಕಾರಿಗಳಾದ ಜಿ.ಬಿ.ಸಂತೋಷ್‌ಕುಮಾರ್, ಡಾ.ಆರ್. ಶೇಖರ್ ನಾಯಕ್, ವಿ.ಜಿ. ಮೋಹನ್, ಎಚ್.ವಿ.ಮುರುಳೀಧರ್ ಇದ್ದರು.