ಏಳುಸುತ್ತಿನ ಕೋಟೆಗೆ ಧ್ವನಿ ಬೆಳಕಿನ ವೈಭವ

CTD 4 DC MEETING--00005
Published on

ಚಿತ್ರದುರ್ಗ: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ದಿಂದ ಗಣಿಬಾಧಿತ ವಲಯ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆಯಡಿ ನಗರದ ಐತಿಹಾಸಿಕ ಕೋಟೆ ಹಾಗೂ ಚಂದ್ರವಳ್ಳಿಯಲ್ಲಿ 28.40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿ, ಕೋಟೆಯ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಧ್ವನಿ ಬೆಳಕು ವ್ಯವಸ್ಥೆ ಅಳವಡಿಸಲಾಗುವುದು. ಇದಕ್ಕಾಗಿ ಭಾರತೀಯ ಪುರಾತತ್ವ ಇಲಾಖೆಯಿಂದ ಶೀಘ್ರ ಅನುಮತಿ ಪಡೆದುಕೊಳ್ಳ ಬೇಕೆಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕೋಟೆಗೆೆ ಪ್ರತಿ ತಿಂಗಳು 35 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. 75 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ಉದ್ಯಾನ, 1 ಕೋಟಿ ರೂ. ವೆಚ್ಚದಲ್ಲಿ ಅಕ್ಕ-ತಂಗಿಯರ ಹೊಂಡದ ಬಳಿ ಕಾರಂಜಿಗಳು ಹಾಗೂ ಒನಕೆ ಓಬವ್ವ ಕಿಂಡಿ ಬಳಿ ಹನುಮಾನ ದ್ವಾರದಿಂದ ಚಂದ್ರವಳ್ಳಿ ತೋಟಕ್ಕೆ ತೆರಳಲು 1.5 ಕಿ.ಮೀ. ಉದ್ದದ ಕಾಲುದಾರಿ ನಿರ್ಮಾಣ ಮಾಡಲಾಗುವುದು ಎಂದರು.
ಚಂದ್ರವಳ್ಳಿ ಕೆರೆ ಸುತ್ತ 3.75 ಕೋಟಿ ರೂ. ವೆಚ್ಚದಲ್ಲಿ ವಾಕಿಂಗ್ ಟ್ರಾೃಕ್, ಬೀದಿದೀಪ ಅಳವಡಿಕೆ, 15 ಲಕ್ಷ ರೂ. ವೆಚ್ಚದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕ, 75 ಲಕ್ಷ ರೂ. ವೆಚ್ಚದಲ್ಲಿ ಪಾರ್ಕಿಂಗ್, 1 ಕೋಟಿ ರೂ. ಖರ್ಚಿನಲ್ಲಿ ಚಂದ್ರವಳ್ಳಿ ಗುಹೆಗೆ ವಿದ್ಯುತ್ ದೀಪಗಳ ಅಳವಡಿಕೆ, 6 ಕೋಟಿ ರೂ. ವೆಚ್ಚದಲ್ಲಿ ಮಕ್ಕಳ ರೈಲು, 1.25 ಕೋಟಿ ರೂ. ವೆಚ್ಚದಲ್ಲಿ ಚಂದ್ರವಳ್ಳಿ ಸಂಪರ್ಕಿಸುವ ರಸ್ತೆಗೆ ಬೀದಿ ದೀಪ ಅಳವಡಿಸಬೇಕಾಗಿದೆ ಎಂದು ತಿಳಿಸಿದರು.
ಕೆಎಂಇಆರ್‌ಸಿ ಅನುದಾನದಡಿ ಹೊಸದುರ್ಗ ತಾಲೂಕು ಹಾಲು ರಾಮೇಶ್ವರದಲ್ಲಿ ಧರ್ಮಛತ್ರ, ಪಾರ್ಕಿಂಗ್, ಶೌಚಗೃಹ, ಹೈಮಾಸ್ಟ್ ದೀಪ ಅಳವಡಿಕೆ. ಹೊಳಲ್ಕೆರೆ ತಾಲೂಕು ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಮೆಟ್ಟಿಲು ನಿರ್ಮಾಣ, ಬೆಟ್ಟದ ಕಲ್ಯಾಣಿ ಪುನರುಜ್ಜೀವನ, ಧರ್ಮಛತ್ರ, ಪಾರ್ಕಿಂಗ್, ಶೌಚೃಗಹ, ಹೈಮಾಸ್ಟ್ ದೀಪಗಳ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಕಾಯ್ದೆ 2015 ಅಡಿ ಪ್ರಮುಖ ಹೋಟೆಲ್‌ಗಳ ನೋಂದಣಿ ಕಡ್ಡಾಯವಾಗಿರಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಯಾತ್ರಿ ನಿವಾಸಗಳು ಸಾರ್ವಜನಿಕರ ಬಳಕೆಗೆ ದೊರಕಬೇಕು. ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸ ಬೇಕೆಂದ ಅವರು, ಪ್ರವಾಸಿ ತಾಣಗಳ ಕುರಿತು ಕಿರುಹೊತ್ತಿಗೆ ಮುದ್ರಿಸುವಂತೆ ಸೂಚಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ತಹಸೀಲ್ದಾರ್‌ಗಳಾದ ಡಾ.ನಾಗವೇಣಿ, ಬೀಬಿಫಾತೀಮಾ, ತಿರುಪತಿ ಪಾಟೀಲ್, ಲೋಕೋಪಯೋಗಿ ಇಲಾಖೆ ಇಇ ಮಲ್ಲಿಕಾರ್ಜುನ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್ ಇದ್ದರು.

*ವಿವಿ ಸಾಗರದಲ್ಲಿ ಜಲಕ್ರೀಡೆ
ವಿವಿ ಸಾಗರ ಜಲಾಶಯದ ಹಿನ್ನೀರು ಸಾಹಸಮಯ ಜಲಕ್ರೀಡೆ ಆರಂಭಿಸಲು ಸಹ ಚಿಂತನೆ ನಡೆಸಲಾಗಿದೆ. ಒಂದು ಜಿಲ್ಲೆ ಒಂದು ತಾಣ ಯೋಜನೆಯಡಿ ವಾಣಿ ವಿಲಾಸ ಸಾಗರದ ಸಂಪೂರ್ಣ ಅಭಿವೃದ್ಧಿ ಯೋಜನೆಗೆ ಹಾಗೂ ಚಂದ್ರವಳ್ಳಿ ಕೆರೆಯಲ್ಲಿ ಜಲಕ್ರೀಡೆ ಹಾಗೂ ದೋಣಿ ವಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿ ಸೂಚಿಸಿದರು.

(ಸಿಟಿಡಿ 4ಡಿಸಿ ಮೀಟಿಂಗ್)
ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಡಿಸಿ ಟಿ.ವೆಂಕಟೇಶ್, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಮಲ್ಲಿಕಾರ್ಜುನ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net