

ಮುದ್ದೇಬಿಹಾಳ: ಹಗಲು ಹೊತ್ತಿನಲ್ಲಿ ಏಳು ತಾಸು ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಾಲೂಕಿನ ಸರೂರು ಗ್ರಾಮರ ರೈತರು ಹಿರೇಮುರಾಳ ಹೆಸ್ಕಾಂ ಉಪ ಕಚೇರಿ ಎದುರಿಗೆ ಗುರುವಾರ ಪ್ರತಿಭಟನೆ ಆರಂಭಿಸಿದರು.
ರೈತರಾದ ಮಂಕಯ್ಯ ಪೂಜಾರಿ, ಸಿದ್ದು ಸಜ್ಜನ, ಚನ್ನಪ್ಪಗೌಡ ಪಾಟೀಲ, ಅಶೋಕ ಬೋರಗಿ ಮತ್ತಿತರರು ಮಾತನಾಡಿ, ಸರೂರ ಗ್ರಾಮಕ್ಕೆ ಕಳೆದ ಎರಡು ತಿಂಗಳಿನಿಂದ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಲೈನ್‌ಮನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಮೊದಲು ಹಗಲಿನಲ್ಲಿಯೇ ಏಳು ತಾಸು ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ ಈಗ ರಾತ್ರಿ 3 ತಾಸು, ಹಗಲು ನಾಲ್ಕು ತಾಸು ವಿದ್ಯುತ್ ಕೊಡುತ್ತಿದ್ದಾರೆ. ಈಗ ಅದನ್ನೂ ಸಹ ಸರಿಯಾಗಿ ಪೂರೈಸುತ್ತಿಲ್ಲ. ಲಕ್ಷಾಂತರ ರೂ. ವೆಚ್ಚ ಮಾಡಿದ ಬೆಳೆದ ಕಬ್ಬು, ಮೆಣಸಿನಕಾಯಿ ಸೇರಿದಂತೆ ಇತರ ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಅಗತ್ಯವಾಗಿದ್ದು ಅಧಿಕಾರಿಗಳು ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಹೆಸ್ಕಾಂ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ ಮಾತನಾಡಿ, ಸದ್ಯಕ್ಕೆ ಮೇಲಧಿಕಾರಿಗಳಿಂದ ಲೋಡಶೆಡ್ಡಿಂಗ್ ಆದೇಶ ಇರುವ ಕಾರಣ ಹಗಲು ಏಳು ತಾಸು ವಿದ್ಯುತ್ ಪೂರೈಸುವುದು ಅಸಾಧ್ಯ. ಮುಂಚಿನಂತೆ ರಾತ್ರಿ ಮೂರು ತಾಸು, ಹಗಲು ಹೊತ್ತಿನಲ್ಲಿ ನಾಲ್ಕು ತಾಸು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತರು ಹಗಲು ಹೊತ್ತಿನಲ್ಲಿಯೇ ಏಳು ತಾಸು ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಾವೀರ ವಂದಕುದರಿ, ಬಸಯ್ಯ ಪೂಜಾರಿ, ಸಿದ್ದು ಬಪ್ಪರಗಿ, ಅಂಬರೀಶ ಢವಳಗಿ, ನಿಖೀಲ್ ಮಲಗಲದಿನ್ನಿ ಇದ್ದರು.