ಮೈಸೂರು: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ 7 ಜನ ಅಂತಾರಾಜ್ಯ ವಂಚಕರವನ್ನು ಬಂಧಿಸಿರುವ ನಗರ ಪೊಲೀಸರು 15 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಗೋಲ್ಡ್ ಬಿಸ್ಕೆಟ್, 2 ಕಾರು, 1 ದ್ವಿಚಕ್ರ ವಾಹನ ಹಾಗೂ 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಮುಸ್ತಫಾ ಯೂಸುಫ್ (57), ಕುನ್ಹಿರಾಮನ್(59), ಮಡಿಕೇರಿಯ ಅಬ್ದುಲ್ ಹಕೀಂ(44), ಕೇರಳದ ಕಾಸರಗೋಡು ಜಿಲ್ಲೆಯ ಮೊಹಮ್ಮದ್ ಶಾಫಿ(42), ಮಡಿಕೇರಿಯ ಬಿ.ಪಿ.ಗುರುಚರಣ್(34), ಮಡಿಕೇರಿ ತಾಲೂಕು ಕುಂಜಿಲ ಗ್ರಾಮದ ಕೆ.ಎ.ಕಾರ್ತಿಕ್(29) ಹಾಗೂ ಮೈಸೂರಿನ ಬನ್ನಿಮಂಟಪದ ಸಮೀವುಲ್ಲಾ(47) ಬಂಧಿತರು.
ಎಸ್.ಎಸ್ ನಗರದಲ್ಲಿ ವಾಸವಾಗಿರುವ ಅಬ್ದುಲ್ ಸಮದ್ ಎಂಬುವರಿಗೆ ಒಂದು ತಿಂಗಳ ಹಿಂದೆ ಯೂಸುಫ್ ಪರಿಚಯವಾಗಿ ತಾನು ಚಿನ್ನದ ವ್ಯಾಪಾರಿ ಆಗಿದ್ದು, ಕಡಿಮೆ ಬೆಲೆಗೆ ಚಿನ್ನವನ್ನು ಕೊಡಿಸುತ್ತೇನೆಂದು ನಂಬಿಸಿದ್ದಾನೆ. ಬಳಿಕ ಆತನಿಂದ 5 ಲಕ್ಷ ರೂ.ಗಳನ್ನು ಪಡೆದು ಚಿನ್ನ ನೀಡದೆ ಮೋಸ ಮಾಡಿದ್ದಾನೆ. ಈ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ರೀತಿಯಲ್ಲಿ ವಿ.ವಿ. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಹನಾಥ್ ಅಸ್ಲಂ ಎಂಬುವರಿಗೆ ಯೂಸುಫ್ ಹಾಜಿ ಎಂಬವನು ಪರಿಚಯವಾಗಿ ತಾನು ಆರ್‌ಬಿಐ ಡೀಲರ್, ಕಡಿಮೆ ಬೆಲೆಗೆ ಚಿನ್ನದ ಬಿಸ್ಕೆಟ್‌ಗಳನ್ನು ಕೊಡಿಸುತ್ತೇನೆಂದು ನಂಬಿಸಿ, ಶಹನಾಥ್ ಅಸ್ಲಂ ಅವರಿಂದ 23.50 ಲಕ್ಷ ರೂ.ಗಳನ್ನು ಪಡೆದು, ಚಿನ್ನವನ್ನು ಕೊಡಿಸದೆ ಮೋಸ ಮಾಡಿರುವ ಬಗ್ಗೆ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು 7 ಜನ ಅಂತಾರಾಜ್ಯ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಗಳ ಪತ್ತೆ ಸಂಬಂಧ ಡಿಸಿಪಿ ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ನರಸಿಂಹರಾಜ ಮತ್ತು ವಿ.ವಿ. ಪುರಂ ಠಾಣೆಯ ವಿಶೇಷ ತಂಡವು ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪತ್ತೆ ಮಾಡಿದೆ.
ಆರೋಪಿಗಳಾದ ಮುಸ್ತಫಾ ಯೂಸುಫ್ ಹಾಗೂ ಮೊಹಮ್ಮದ್ ಶಾಫಿ ವಿರುದ್ಧ ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿ ಪೊಲೀಸ್ ಠಾಣೆಯಲ್ಲಿ ಇದೇ ರೀತಿ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.