

ಬಳ್ಳಾರಿ : ರಾಜ್ಯ ಸರ್ಕಾರ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಯಾಗಿದ್ದ ಸರ್ಕಾರಿ ನೌಕಕರಿಗೆ ಏಳನೇ ವೇತನ ಆಯೋಗದಂತೆ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದು ಕರ್ನಾಟಕ ನಿವೃತ್ತಿ ನೌಕರರ ವೇದಿಕೆ ರಾಜ್ಯ ಸಂಚಾಲಕ ಮೆಹಾತಾಬ್ ಒತ್ತಾಯಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ನಿವೃತ್ತಿ ನೌಕರರ ವೇದಿಕೆಯಿಂದ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜುಲೈ ತಿಂಗಳು 2022 ರಿಂದ 2024 ಜುಲೈ ತಿಂಗಳವರೆಗೆ ನಿವೃತ್ತಿಯಾಗಿದ್ದ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ ಲೆಕ್ಕಚಾರದ ಅನುಸಾರ ಡಿಸಿಆರ್‌ಜಿ, ಗಳಿಕೆ ರಜೆ ಸೇರಿದಂತೆ ಆರ್ಥಿಕ ಸೌಲಭ್ಯ ನೀಡಲಾಗಿದೆ. ಆದರೆ, ಏಳನೇ ವೇತನ ಆಯೋಗದ ಸೌಲಭ್ಯ ಒದಗಿಸದೆ ಅನ್ಯಾಯ ಮಾಡಿದೆ. ಆದ್ದರಿಂದ, ಸೌಲಭ್ಯಕ್ಕಾಗಿ ಅ. 1 (ಹಿರಿಯ ನಾಗರಿಕರ ದಿನಾಚರಣೆ) ದಿನದಂದು ಡಿಸಿ ಕಚೇರಿ ಮುಂಭಾಗದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಕೂಡಲೇ ಎಚ್ಚೇತ್ತುಕೊಳ್ಳದಿದ್ದರೆ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು. ಸರ್ಕಾರ ನಿವೃತ್ತಿ ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಸಂಚಾಲಕರಾದ ವಿ. ಹನುಮಂತಪ್ಪ , ಎ. ಕೆ. ಚಂದ್ರಪ್ಪ, ಕೆ. ಜಿಲಾನಿ, ಕೆಂಚಿಯಲಪ್ಪ ಇದ್ದರು.