ಏಳನೇ ವೇತನ ಆಯೋಗ ಶೀಘ್ರ ರಚನೆ : ಸಿ.ಎಸ್. ಷಡಾಕ್ಷರಿ

ಏಳನೇ ವೇತನ ಆಯೋಗ ಶೀಘ್ರ ರಚನೆ : ಸಿ.ಎಸ್. ಷಡಾಕ್ಷರಿ
Published on

ಅರಕಲಗೂಡು: ಏಳನೇ ವೇತನ ಆಯೋಗವನ್ನು ಶೀಘ್ರವಾಗಿ ರಚನೆ ಮಾಡುವುದಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ನಡೆದ ನೌಕರರ ದಸರಾ ಕಾರ್ಯಕ್ರಮದಲ್ಲಿ ನಡೆದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಘ ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದಿದೆ. ನವೆಂಬರ್ ತಿಂಗಳಲ್ಲಿ ಆಯೋಗ ರಚನೆ ಮಾಡಿ 2023ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡುವುದಾಗಿ ತಿಳಿಸಿದ್ದಾರೆ.

ಎನ್ ಪಿಎಸ್ ನೌಕರರಿಗೆ ಹಳೆಯ ಪಿಂಚಣಿ ಪದ್ಧತಿಯನ್ನು ಜಾರಿಗೆ ತರುವ ಕುರಿತು ಮಾತಕತೆ ನಡೆಸಲಾಗಿದೆ. ಯಾವುದಾದರೂ ಒಂದು ರಾಜ್ಯದಲ್ಲಿ ಜಾರಿಗೆ ಬಂದರೆ ಅದನ್ನು ಅನುಸರಿಸಿ ಇಲ್ಲೂ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿಯೂ ಮುಖ್ಯ ಮಂತ್ರಿಗಳು ಹೇಳಿದ್ದಾರೆ. 7 ನೇ ವೇತನ ಆಯೋಗದ ವರದಿ ಜಾರಿಗೆ ಬಂದ ಬಳಿಕ ಎನ್ ಪಿ ಎಸ್ ಸಮಸ್ಯೆ ಕುರಿತು ಸಂಘ ಹೋರಾಟವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದರು.

ಸರ್ಕಾರಿ ನೌಕರರಿಗೆ ರೂ 1400 ಕೋಟಿ ಯೋಜನೆಯ ಆರೋಗ್ಯ ಯೋಜನೆಯ ಜಾರಿಗೆ ಸರ್ಕಾರ ಮುಂದಾಗಿದೆ. ಸಂಘದ ಕಾರ್ಯ ಚಟುವಟಿಕೆ ಕುರಿತು ಅಪನಂಬಿಕೆ ಬೇಡ. ನೌಕರರ ಹಿತರಕ್ಷಣೆ ಸಂಗಡ ಸಮಾಜ ಮುಖಿ ಕಾರ್ಯಗಳಲ್ಲೂ ಸಂಘ ತೊಡಗಿಸಿಕೊಂಡಿದೆ. ರಾಜ್ಯ ಸರ್ಕಾರ ಅಶಕ್ತ ಗೋವುಗಳ ರಕ್ಷಣೆಗೆ ಕೈಗೊಂಡಿರುವ ಪುಣ್ಯ ಕೋಟಿ ಯೋಜನೆಯಲ್ಲಿ ಒಂದು ವರ್ಷ ಕಾಲ ಗೋವುಗಳ ರಕ್ಷಣೆಗೆ ಅಗತ್ಯವಾದ ಧನ ಸಹಾಯವನ್ನು ನೌಕರರ ಸಂಘದಿಂದ ನೀಡಲು ಸಂಘ ತೀರ್ಮಾನಿಸಿದೆ. ರಾಜ್ಯದಲ್ಲಿ 7.20 ಲಕ್ಷ ನೌಕರರು ಇರಬೇಕಾದಲ್ಲಿ 5.40 ಲಕ್ಷ ಮಂದಿ ಮಾತ್ರ ಇದ್ದು 2.60 ಲಕ್ಷ ಹುದ್ದೆಗಳಿಗೆ ನೇಮಕಾತಿಯಾಗಿಲ್ಲ, ಹೀಗಾಗಿ ನೌಕರರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂದರು.

ಶಾಸಕ ಎ.ಟಿ.ರಾಮಸ್ವಾಮಿ, ರಾಜ್ಯಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಬಿ.ಡಿ.ದಿನೇಶ್, ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಶಿವಸ್ವಾಮಿ, ಕ್ರೀಡಾ ಕಾರ್ಯದರ್ಸಿ ಸಿ.ಕೆ.ರಘು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕೆರ ಸಂಘದ ಅಧ್ಯಕ್ಷ ರಾಜಶೇಖರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜೇಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್ .ವೆಂಕಟೇಶ್, ಕಾರ್ಯದರ್ಶಿ ಟಿ.ಎನ್ ಮಹೇಶ್, ಇದ್ದರು.

ಕಾರ್ಯಕ್ರಮಕ್ಕೆ ಮುನ್ನ ತಾಲೂಕು ಕಚೇರಿಯಿಂದ ಬನ್ನಿ ಮಂಟಪದವರೆಗೆ ಸಾಂಪ್ರದಾಯಕ ನಡಿಗೆ (ಹರಿಟೇಜ್ ವಾಕ್) ನಡೆಸಲಾಯಿತು. ಇದೇ ವೇಳೆ ತಾಲ್ಲೂಕು ಸರ್ಕಾರಿ ನೌಕರರ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣವನ್ನು ರಾಜ್ಯಾಧ್ಯಕ್ಷ ಷಡಾಕ್ಷರಿ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net