ಏಲಕ್ಕಿ ಸಹಕಾರ ಸಂಘದಲ್ಲಿ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಆರಂಭ: ಸಹಕರಿಸಲು ಅಧ್ಯಕ್ಷ ಸೂದನ ಈರಪ್ಪ ಮನವಿ

Z ELAKKI SAHAKARA
Published on

ಮಡಿಕೇರಿ: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಪ್ರಸ್ತುತ ವರ್ಷದಿಂದಲೇ ಆರಂಭಗೊಳ್ಳಲಿದ್ದು, ಸಂಘದಲ್ಲಿ ಬೆಳೆ ಸಂಗ್ರಹಿಸಿಡುವ ಬೆಳೆಗಾರರಿಗೆ ಅಗತ್ಯವಿದ್ದಲ್ಲಿ ಮುಂಗಡ ಹಣ ನೀಡಿ ಮಾರುಕಟ್ಟೆಯಲ್ಲಿ ಉತ್ತಮ ದರ ಕೊಡಿಸಲು ಪ್ರಯತ್ನ ಮಾಡಲಾಗುವುದೆಂದು ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರಿಮೆಣಸು ಹಾಗೂ ಏಲಕ್ಕಿ ಸಂಗ್ರಹಿಸುವ ಸಂದರ್ಭ ತೂಕ ಮತ್ತು ದರ ಪಾರದರ್ಶಕವಾಗಿರಲಿದೆ. ಆರ್ಥಿಕವಾಗಿ ಕಷ್ಟದಲ್ಲಿರುವ ರೈತರು ತಮ್ಮ ಫಸಲನ್ನು ಕಡಿಮೆ ದರಕ್ಕೆ ಮಾರಾಟ ಮಾಡುವ ಬದಲು ಸಂಘದ ನೆರವನ್ನು ಪಡೆಯಬಹುದಾಗಿದೆ. ಬೆಳೆ ನೀಡಿದ ದಿನದ ಬೆಲೆಯಾಧರಿಸಿ ಶೇ.೪೦ ರಷ್ಟು ಹಣವನ್ನು ಮುಂಗಡವಾಗಿ ಬೆಳೆಗಾರರಿಗೆ ನೀಡಲು ಚಿಂತನೆ ನಡೆಸಲಾಗಿದ್ದು, ಅಂತಿಮ ನಿರ್ಧಾರವನ್ನು ಮಹಾಸಭೆಯಲ್ಲಿ ಕೈಗೊಳ್ಳಲಾಗುವುದು. ಬೆಳೆಗಾರರು ಸೂಚಿಸುವ ದಿನ ಬೆಳೆಯನ್ನು ಮಾರಾಟ ಮಾಡಿ ಉಳಿದ ಹಣವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಬ್ಬ ಸದಸ್ಯರಿಗೂ "ರಿಬೇಟ್ ಪಾಸ್ ಪುಸ್ತಕ" ನೀಡಿ ಕಚೇರಿಯಲ್ಲಿ ಪ್ರತಿಯೊಂದನ್ನು ಇಟ್ಟುಕೊಂಡು ಹತ್ಯಾರು ವಿಭಾಗ, ಮತ್ತಿತರ ವ್ಯವಹಾರ ಮಾಡಿದ್ದರ ಬಗ್ಗೆ ಕ್ರಮಬದ್ಧವಾಗಿ ದಾಖಲಿಸಲಾಗುವುದು. ಸದಸ್ಯರಾಗಿದ್ದವರ ಪತ್ನಿ ಮತ್ತು ಮಕ್ಕಳಿಗೆ ಸದಸ್ಯತ್ವ ದೊರಕಿಸಿಕೊಡಲು ಸರಳ ಯೋಜನೆಯನ್ನು ಮತ್ತು ಮರಣ ನಿಧಿಯನ್ನು ಇಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಾಡು ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ಸರ್ವಸಮ್ಮತವಾದ ತೀರ್ಮಾನವನ್ನು ಕೈಗೊಳ್ಳಲಾಗುವುದು. ವಿರಾಜಪೇಟೆ ತಾಲ್ಲೂಕಿನಲ್ಲಿ ಶಾಖೆಯೊಂದನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸೂದನ ಈರಪ್ಪ ತಿಳಿಸಿದರು.
ಆರೋಪದಲ್ಲಿ ಹುರುಳಿಲ್ಲ: ಇತ್ತೀಚಿಗೆ ಸಂಘದ ಮಾಜಿ ಅಧ್ಯಕ್ಷ ಬಿ.ಈ.ಬೋಪಯ್ಯ ಅವರು "ರೈತ ಮಿತ್ರಕೂಟ"ದ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ರೂ.೩,೫೦೦ ಮೊತ್ತದ ಒಡೆದ ಸಿಮೆಂಟ್ ಶೀಟ್‌ನ ಬಗ್ಗೆ ಆರೋಪ ಮಾಡಲಾಗಿದೆ. ಆಗ ವಿಭಾಗ ಮುಖ್ಯಸ್ಥರಾಗಿದ್ದ ದಿ.ಉದಯ ಅವರು ಆ ಒಡೆದ ಸರಕಿನ ಮೌಲ್ಯ ರೂ. ೬೪೬೮ ಎಂದು ತೋರಿಸಿದ್ದಾರೆ. ಸರಕು ಪರಿಶೀಲನೆಯ ಅಂತಿಮ ಪಟ್ಟಿಗೆ ಮಾಜಿ ಅಧ್ಯಕ್ಷರು ಸಹಿ ಮಾಡಿ ದೃಢೀಕರಿಸಿರುತ್ತಾರೆ. ರೂ. ೬೪೬೮ರ ನೈಜ ಬೆಲೆಯ ಸಿಮೆಂಟ್ ಶೀಟ್‌ಗಳು ಒಡೆದು ಹೋಗಿದ್ದು, ಅರ್ಧಬೆಲೆಗೆ ಮಾರಾಟ ಮಾಡುವುದು ನ್ಯಾಯ ಸಮ್ಮತ. ಆದ್ದರಿಂದ ಮಳೆಗಾಲದಲ್ಲಿ ಮನೆಯ ಸೂರು ಸೋರುತ್ತಿದ್ದ ಬಡ ವ್ಯಕ್ತಿಯೊಬ್ಬರಿಗೆ ರೂ. ೩,೫೦೦ ಬೆಲೆಯ ಒಡೆದ ಸಿಮೆಂಟ್ ಶೀಟ್‌ಗಳನ್ನು ನಾನು ಕೊಡಿಸಿದ್ದು ನಿಜ ಎಂದು ಈರಪ್ಪ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಬಿ.ಸಿ.ಚೆನ್ನಪ್ಪ ಮದೆನಾಡು, ಅಜ್ಜಿನಂಡ ಎಂ.ಗೋಪಾಲಕೃಷ್ಣ, ಕುಂಬಗೌಡನ ಡಿ.ವಿನೋದ್ ಕುಮಾರ್ ಮಕ್ಕಂದೂರು ಹಾಗೂ ಪೆರಿಯನ ಕೆ.ಉದಯ ಕುಮಾರ್ ಚೆಟ್ಟಳ್ಳಿ ಉಪಸ್ಥಿತಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net