

ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆ.30ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಇದರ ಭಾಗವಾಗಿ ಸೋಮವಾರ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಏರೋಬಿಕ್ ಪ್ರದರ್ಶನಕ್ಕೆ ಪೂರ್ವ ತಯಾರಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಎಂ.ಆರ್ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಸಿ.ಎನ್ ಮಂಜೇಗೌಡ, ಮರಿತಿಬ್ಬೇಗೌಡ, ಮಧು ಜಿ. ಮಾದೇಗೌಡ ಹಾಗೂ ಇತರ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ದಿಸೆಯಲ್ಲಿ ಮೈಸೂರು ಶೈಕ್ಷಣಿಕ ವಿಭಾಗೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಶಾಲೆಯ 1,250 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಏರೋಬಿಕ್ ಹಾಗೂ ಸಾಮೂಹಿಕ ವ್ಯಾಯಾಮ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಮಹದೇವ್ ತಿಳಿಸಿದರು.
ಬಿಇಒ ಶಿವರಾಜು, ಶಿಕ್ಷಣ ಸಂಯೋಜಕ ಕಿರಣ್‌ಕುಮಾರ್, ವಿವಿಧ ಶಾಲೆಯ ಶಿಕ್ಷಕರು ಭಾಗಿಯಾಗಿದ್ದು, ಪಟ್ಟಣದ ಶ್ರೀ ವಿವೇಕಾನಂದ, ಕ್ರಿಸ್ತರಾಜ, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಜಿ.ವಿ ಗೌಡ, ಬಿಎಂಜಿ, ಮುರಾರ್ಜಿ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆ ಮಕ್ಕಳಿಂದ ಪೂರ್ವಾಭ್ಯಾಸ ನಡೆಯಿತು.