ಏಮ್ಸ್‌ಗಾಗಿ ಕೇಂದ್ರ ಸಚಿವರ ಭೇಟಿ ನಾಳೆ

IMG20230820112854
ರಾಯಚೂರಿನ ಪತ್ರಿಕಾಭವನದಲ್ಲಿ ಏಮ್ಸ್ ಹೋರಾಟ ಸಮಿತಿ ಸಂಚಾಲಕ ಅಶೋಕಕುಮಾರ ಜೈನ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೋರಾಟ ಸಮಿತಿ ಪದಾಕಾರಿಗಳಾದ ಎನ್.ಮಹಾವೀರ, ಜಾನ್‌ವೆಸ್ಲಿ, ಎಸ್.ಎಸ್.ಪಾಟೀಲ್, ಕಾಮರಾಜ ಪಾಟೀಲ್ ಇದ್ದರು.
Published on

ರಾಯಚೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ಜಿಲ್ಲೆಯ ನಿಯೋಗ ಆ.22ರಂದು ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸೂಕ್ ಮಾಂಡ್ವೆಯನ್ನು ಭೇಟಿಯಾಗಲಿದೆ ಎಂದು ಏಮ್ಸ್ ಹೋರಾಟ ಸಮಿತಿ ಸಂಚಾಲಕ ಅಶೋಕಕುಮಾರ ಜೈನ್ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಸಚಿವ ಎನ್.ಎಸ್.ಬೋಸರಾಜು ಹಾಗೂ ಜಿಲ್ಲೆಯ ಶಾಸಕರ ಜತೆಗೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಸೇರಿದಂತೆ ಸಮಿತಿಯ ಇಬ್ಬರು ನಿಯೋಗದಲ್ಲಿ ಇರಲಿದ್ದಾರೆ ಎಂದರು.
ಕೇಂದ್ರ ಆರೋಗ್ಯ ಸಚಿವರು ಮಧ್ಯಾಹ್ನ 2ಕ್ಕೆ ನಿಯೋಗದ ಭೇಟಿಗೆ ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕಾದ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡುವುದರ ಜತೆಗೆ ಏಮ್ಸ್ ಸ್ಥಾಪನೆಗೆ ಬೇಕಾದ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಚಿವರು ಭರವಸೆ ನೀಡಲಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರುಗಳು ನಿಯೋಗದಲ್ಲಿರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ನಿಯೋಗದಲ್ಲಿ ಯಾರೂ ಇರಬೇಕು ಎನ್ನುವ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂದು ಅಶೋಕಕುಮಾರ ಜೈನ್ ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪದಾಕಾರಿಗಳಾದ ಎನ್.ಮಹಾವೀರ, ಜಾನ್‌ವೆಸ್ಲಿ, ಎಸ್.ಎಸ್.ಪಾಟೀಲ್, ಕಾಮರಾಜ ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net