

ಬೆಳಗಾವಿ: ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯ ಮಳೆಯಾಶ್ರಯದಲ್ಲಿ ಬೇಸಾಯ ಮಾಡುತ್ತಿರುವ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದಕ್ಕಾಗಿ ವರದಾನವಾಗಿ ಶ್ರೀ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿ, ಮೊದಲ ಹಂತದಲ್ಲಿ ಸಿಎಂ ಬೊಮ್ಮಾಯಿ ಅವರು 100 ಕೋಟಿ ರೂ.ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹರ್ಷ ವ್ಯಕ್ತಪಡಿಸಿದ್ದಾರೆ.
ಯೋಜನೆ ಕುರಿತು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿಯ ಮುಖ್ಯ ಇಂಜಿನಿಯರ್ ರಾಜೇಶ ಅವರನ್ನು ಭೇಟಿ ಮಾಡಿ, ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಕುರಿತು ಕವಟಗಿಮಠ ಅವರು ವಿವರವಾಗಿ ಚರ್ಚಿಸಿ, ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ. ಚಿಕ್ಕೋಡಿ ತಾಲೂಕಿನ ಚಿಂಚಣಿ, ಕುಪ್ಪಾನವಾಡಿ, ಕೋಥಳಿ, ನವಲಿಹಾಳ, ಕುಠಾಳಿ, ಹಂದ್ಯಾನವಾಡಿ, ನಾಯಿಂಗ್ಲಜ್, ಧುಳಗನವಾಡಿ, ಯಾದ್ಯಾನವಾಡಿ, ವಾಳಕಿ, ಪಟ್ಟಣಕುಡಿ, ರಾಮಪೂರ, ಅದುಲಝರಿ, ಗವಾನ, ಗಿರಗಾಂದ ಪೀರವಾಡಿ ಹಾಗೂ ಬಡಕಲಾಟ, ಸಂಕನವಾಡಿ, ತಪಕರವಾಡಿ, ಶಿರಗಾಂವ ಗ್ರಾಮಗಳು, ಚಿಕ್ಕೋಡಿ ಉಪ ಕಾಲುವೆಯಲ್ಲಿ ಸೇರ್ಪಡೆಯಾಗದೆ ಬಾಕಿ ಉಳಿದಿರುವ 17 ಗ್ರಾಮಗಳ ಸುಮಾರು 15,400 ಎಕರೆಗಳಷ್ಟು ಜಮೀನಿಗೆ ಶ್ರೀಮಹಾಲಕ್ಷ್ಮೀ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಮುಖ್ಯಮಂತ್ರಿ ಅವರು ಆಸಕ್ತಿ ವಹಿಸಿ, ಅನುದಾನ ಬಿಡುಗಡೆಗೊಳಿಸಿದ್ದು, ಚಿಕ್ಕೋಡಿ ತಾಲೂಕಿನ ರೈತರಿಗೆ ಸಂತಸ ತಂದಿದೆ ಎಂದು ಕವಟಗಿಮಠ ತಿಳಿಸಿದ್ದಾರೆ.