

ಶೃಂಗೇರಿ: ಏಡ್ಸ್ ನಿವಾರಣೆಗೆ ಯಾವುದೇ ಲಸಿಕೆ ಲಭ್ಯವಿಲ್ಲ. ಆದರೆ ಸೋಂಕಿತರು ಪೌಷ್ಟಿಕ ಆಹಾರ, ರೋಗನಿರೋಧಕ ಚಿಕಿತ್ಸೆ ಪಡೆಯಬಹುದು ಎಂದು ಸಾರ್ವಜನಿಕ ಆಸ್ಪತ್ರೆ ಡಾ. ಪ್ರಣೀತ್ ಪ್ರೇಮ್‌ಜೀ ತಿಳಿಸಿದರು.
ಗುರುವಾರ ಸಾರ್ವಜನಿಕ ಆಸ್ಪತ್ರೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಚ್‌ಐವಿ ಸೋಂಕಿತರು ಪೌಷ್ಟಿಕ ಆಹಾರ ತೆಗೆದುಕೊಳ್ಳಲು ವಿಶ್ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಮಾನವನ ರಕ್ಷಣಾ ವ್ಯವಸ್ಥೆ ಮೇಲೆ ತೀವ್ರವಾಗಿ ಎಚ್‌ಐವಿ ಸೋಂಕು ತಗಲುತ್ತದೆ. ಇದನ್ನು ಬಾರದಂತೆ ತಡೆಯುವ ಮಾನಸಿಕ ಸ್ಥಿತಿ ಪ್ರತಿಯೊಬ್ಬರಲ್ಲೂ ಇರಬೇಕು. ಏಡ್ಸ್ ರೋಗಿಗಳಿಗೆ ಯಾವುದೇ ರೀತಿಯ ತಾರತಮ್ಯ ಮಾಡಬಾರದು. ಅವರಿಗೆ ಆತ್ಮಸ್ಥೆರ್ಯ ತುಂಬಿ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ಉತ್ತಮ ನಡತೆಯಿಂದ ಎಲ್ಲರೂ ಭವಿಷ್ಯ ರೂಪಿಸಿಕೊಂಡು ಏಡ್ಸ್ ಸೋಂಕಿನಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು. ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಪರಿಮೂಡಿಸಬೇಕು ಎಂದರು.
ರೋಗಿಗಳಿಗೆ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಿಕ್ಕಮಗಳೂರಿನ ಬಾಂಧವ್ಯ ನೆಟ್‌ವರ್ಕ್ ಸಿಬ್ಬಂದಿಯನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ, ಎನ್‌ಎಸ್‌ಎಸ್ ಘಟಕದ ಸಂಚಾಲಕ ಪ್ರಶಾಂತ್, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ನೇಹಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ಇದ್ದರು.