

ಚಿತ್ರದುರ್ಗ: ಮುಂಜಾಗ್ರತೆ, ಉತ್ತಮ ಜೀವನಶೈಲಿಯಿಂದ ಏಡ್ಸ್ ನಿಯಂತ್ರಣ ಸಾಧ್ಯ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಗುಡ್ಡದರಂಗವ್ವನಹಳ್ಳಿ ಸಮೀಪದ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಶ್ವ ಏಡ್ಸ್ ದಿನ’ ಜನ ಜಾಗೃತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂಜಾಗ್ರತೆ ವಹಿಸಿದಲ್ಲಿ ಎಚ್‌ಐವಿ ಸೋಂಕು ಹರಡದಂತೆ ನಿಯಂತ್ರಿಸಬಹುದು. ಏಡ್ಸ್‌ಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆಗಳು ನಡೆಯುತ್ತಿವೆ. ಎಚ್‌ಐವಿ ಸೋಂಕು ಮನುಷ್ಯನ ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ ಎಂದರು.
ಅಸುರಕ್ಷಿತ ಲೈಂಗಿಕ ಸಂಬಂಧ, ಸೋಂಕಿತ ರಕ್ತ, ಹೆರಿಗೆ ಸಮಯ, ಸೂಜಿ, ಹರಿತ ಸಲಕರಣೆ ಇತ್ಯಾದಿಗಳಿಂದ ಹರಡುವ ಸಾಧ್ಯತೆಗಳಿದ್ದು, ಸೂಕ್ತ ಮುನ್ನೇಚ್ಚರಿಕೆ ಅಗತ್ಯವಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ನಾಲ್ಕು ವಿಧಾನಗಳಲ್ಲಿ ಹರಡುವ ಎಚ್‌ಐವಿ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆಯೇ ಸೂಕ್ತ ಮಾರ್ಗ ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ಜಿಲ್ಲಾ ಕಾರ‌್ಯಾಕ್ರಮಾಧಿಕಾರಿ ಡಾ.ಸಿ.ಒ.ಸುಧಾ ಮಾತನಾಡಿ, ಏಡ್ಸ್ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿ ಭಾರತ 3ನೇ ಸ್ಥಾನದಲ್ಲಿ ಇದೆ. ದೇಶದಲ್ಲಿ 25 ಲಕ್ಷ ಎಚ್‌ಐವಿ ಸೋಂಕಿತರು ಕರ್ನಾಟಕದಲ್ಲಿ 7 ಲಕ್ಷ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ 8517 ಸೋಂಕಿತರು ಇದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಡಿ.ಗೀತಾಂಜಲಿ, ಎಆರ್‌ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ರೂಪಶ್ರೀ, ಸ್ತ್ರೀ ರೋಗ ತಜ್ಞೆ ಡಾ.ಉಮಾನಂಜುಂಡಪ್ಪ, ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಂ.ವಿ.ಲೋಕೇಶ್, ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಬಿ.ವೈ.ಯುವರಾಜ್, ಸ್ನಾತಕೋತ್ತರ ಕೇಂದ್ರದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಡಿ.ಶಶಿಧರ ಮತ್ತಿತರರು ಇದ್ದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ಚಿತ್ರದುರ್ಗ ವೈದ್ಯಕೀಯ ಮಹಾ ವಿದ್ಯಾಲಯ, ದಾವಣಗೆರೆ ವಿವಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಮತ್ತಿತರ ಸಂಘ-ಸಂಸ್ಥೆಗಳಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.