ಏಡ್ಸ್ ತಡೆಗೆ ಜಾಗೃತಿ, ಮುಂಜಾಗ್ರತೆ ಅಗತ್ಯ : ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಅಭಿಪ್ರಾಯ

1CBP6AIDS
Published on

ಚಿಕ್ಕಬಳ್ಳಾಪುರ : ಎಚ್‌ಐವಿ ನಿಯಂತ್ರಣಕ್ಕೆ ವ್ಯಾಪಕ ಜಾಗೃತಿ, ಮುಂಜಾಗ್ರತಾ ಕ್ರಮಗಳ ಕಡ್ಡಾಯ ಪಾಲನೆ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಅಭಿಪ್ರಾಯಪಟ್ಟರು.

ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣಾ ಘಟಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರೆಡ್ ರಿಬ್ಬನ್ ಕ್ಲಬ್ ಮಂಗಳವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿರಂತರ ಜಾಥಾ, ಕಾರ್ಯಾಗಾರ ಮೂಲಕ ಎಚ್‌ಐವಿ/ಏಡ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು. ಇದನ್ನು ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸಿ, ಮುಂಜಾಗ್ರತಾ ಕ್ರಮ ಪಾಲಿಸಿದಾಗ ಮಾರಕ ಕಾಯಿಲೆ ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಎಚ್‌ಐವಿ ಮಾರಕ ಕಾಯಿಲೆ. ಇದು ಮಾನವನ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಇದನ್ನು ಸಂಪೂರ್ಣವಾಗಿ ವಾಸಿ ಮಾಡುವ ನಿರ್ದಿಷ್ಟ ಲಸಿಕೆ ಇಲ್ಲ. ಇದಕ್ಕೆ ಮುನ್ನೆಚ್ಚರಿಕೆಯೇ ಒಳ್ಳೆಯ ಮದ್ದು ಎಂದು ತಿಳಿಸಿದರು.

ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಆಂಧ್ರದ ಗಡಿ ಭಾಗದಲ್ಲಿರುವ ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜು, ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿರ್ಮೂಲನಾ ಕಾರ್ಯಕ್ರಮಾಧಿಕಾರಿ ಡಾ ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹರೀಶ್ ಕುಮಾರ್ ಮತ್ತಿತರರು ಇದ್ದರು.

ಏಡ್ಸ್ ಜಾಗೃತಿ ಜಾಥಾ : ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಳಿಗೆ ಸ್ಥಾಪಿಸಿ ಕರಪತ್ರ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಮತ್ತೊಂದೆಡೆ ಏಡ್ಸ್ ರೋಗ ಹರಡುವಿಕೆ, ಮುಂಜಾಗ್ರತಾ ಕ್ರಮದ ಬಗ್ಗೆ ಕಲಾವಿದರು ನಡೆಸಿದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು. ಜಿಲ್ಲಾಸ್ಪತ್ರೆ ಆವರಣದಿಂದ ನೂರಾರು ಮಂದಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿ ತರಬೇತಿ ಕಾಲೇಜು ವಿದ್ಯಾರ್ಥಿಗಳು ಜಾಥಾ ಹೊರಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net