ಏಡ್ಸ್ ತಡೆಗೆ ಕೈಜೋಡಿಸಿ

05 YERRISWAMY 06
Published on

ಬಳ್ಳಾರಿ : ಹೆಚ್‌ಐವಿ ಎಂಬ ಮಹಾಮಾರಿಯನ್ನು ಹೋಗಲಾಡಿಸಲು ಏಡ್ಸ್ ವೈರಸ್ ಬಗ್ಗೆ ಹದಿಹರೆಯದವರು ಜಾಗೃತಿ ಹೊಂದಬೇಕು ಎಂದು ಪಾಲಿಕೆ ಮೇಯರ್‌ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಅಮೇಚೂರು ಕಬಡ್ಡಿ ಅಸೊಷಿಯೇಷನ್ ಸಹಯೋಗದೊಂದಿಗೆ ಯುವಜನತೆಗೆ ಹೆಚ್‌ಐವಿ-ಏಡ್ಸ್ ಜಾಗೃತಿ ನೀಡಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅಂತರ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಗುರುವಾರ ಆಯೋಜಿಸಿದ್ದ ಪ್ರೊ-ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಸಮಾಜವನ್ನು ಹೆಚ್‌ಐವಿಯಿಂದ ಬಾಧಿತರಾಗದಂತೆ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದ್ದು, ಇತರರಿಗೂ ಜಾಗೃತಿ ನೀಡುವ ಮೂಲಕ ಆರೋಗ್ಯ ಇಲಾಖೆಯು ಏಡ್ಸ್ ನಿಯಂತ್ರಣಕ್ಕಾಗಿ ಕೈಗೊಳ್ಳುವ ಜಾಗೃತಿಯ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೊಡಿಸಬೇಕು ಎಂದರು.
ಡಿಎಚ್‌ಒ ಡಾ.ವೈ. ರಮೇಶಬಾಬು ಮಾತನಾಡಿ, ಜಿಲ್ಲೆಯಲ್ಲಿ ಹೆಚ್‌ಐವಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಒಟ್ಟಾರೆ ಪ್ರಕರಣಗಳಲ್ಲಿ ಯುವಜನತೆಯ ಸಂಖ್ಯೆ ಹೆಚ್ಚುತ್ತಿದೆ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ ಆಯ್ದ ನಗರಗಳಲ್ಲಿ ಹೋರ್ಡಿಂಗ್ ಅಳವಡಿಸಿ ಜಾಗೃತಿ ನೀಡಲಾಗುತ್ತಿದ್ದು, ಅಸುರಕ್ಷಿತ ಲೈಂಗಿಕತೆಯಿಅದ ದೂರವಿರಲು, ಮದುವೆ ಮುನ್ನ ಬ್ರಹ್ಮಚಾರ್ಯ ಪಾಲನೆಗೆ ಮಹತ್ವ ನೀಡಬೇಕು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ವಿ. ಇಂದ್ರಾಣಿ, ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌ಅಧ್ಯಕ್ಷ ರಮೇಶ ಮಾತನಾಡಿದರು. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ನಾಲ್ಕು ಮಹಿಳಾ ಹಾಗೂ ಆರು ಪುರುಷ ತಂಡಗಳು ಭಾಗವಹಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net