

ಚಿತ್ರದುರ್ಗ: ಶಿಸ್ತು, ಸಮಯ ಪಾಲನೆ, ಏಕಾಗ್ರತೆ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸಲು ನಾಟಕಗಳು ಸಹಕಾರಿ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿನಗಳ ಬಾದರದಿನ್ನಿ ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿ ಹರಿಯುವ ನದಿ ಇದ್ದಂತೆ. ನಾವಿಂದು ಎಷ್ಟೇ ಆಧುನಿಕತೆ ಕಡೆಗೆ ನಡೆದರೂ ಕೂಡ ರಂಗಭೂಮಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ನೂರಾರು ಕಲಾವಿದರು ತಮ್ಮ ಜೀವನವನ್ನು ಕಟ್ಟಿಕೊಂಡು ಸಾಧನೆ ಮಾಡಿದ ಉದಾಹರಣೆಗಳಿವೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಮಾತನಾಡಿ, ಅಶೋಕ ಬಾದರದಿನ್ನಿ ಅವರು ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನಿರ್ದೇಶನದಲ್ಲಿ ನಾಟಕ, ರೂಪಕಗಳು ಸಮಾಜದಲ್ಲಿರುವ ಮೌಢ್ಯಗಳನ್ನು ಕಿತ್ತೊಗೆಯುವಂತೆ ಸಂದೇಶ ನೀಡಿವೆ. ರಂಗಭೂಮಿಗೆ ಅನೇಕ ಕಲಾವಿದರನ್ನು ಹಾಗೂ ಕಲಾ ತಂಡಗಳನ್ನು ಕೊಡುಗೆ ನೀಡಿದ್ದಾರೆ. ಬಾದರದಿನ್ನಿ ಅವರಿಂದ ತರಬೇತಿ ಪಡೆದ ಅನೇಕ ಕಲಾತಂಡಗಳಿಂದು ರಾಷ್ಟಮಟ್ಟದಲ್ಲಿ ಕೀರ್ತಿ ಪಡೆದಿವೆ ಎಂದರು.
ರಂಗಕರ್ಮಿಗಳಾದ ಕೆಪಿಎಂ ಗಣೇಶಯ್ಯ, ಎಂ.ಕೆ.ಹರೀಶ್, ಇಳಕಲ್‌ನ ಮಹಂತೇಶ್ ಗಜೇಂದ್ರಗಡ, ಜಂಬುನಾಥ್, ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಡಾ.ಯಶೋದಾ ರಾಜಶೇಖರಪ್ಪ, ಅಕಾಡೆಮಿ ಅಧ್ಯಕ್ಷೆ ಅನಸೂಯಾ ಬಾದರದಿನ್ನಿ ಮತ್ತಿತರರು ಇದ್ದರು.
ಅಕಾಡೆಮಿ ಕಲಾವಿದರು ಪ್ರಕಾಶ್ ಬಾದರದಿನ್ನಿ ನಿರ್ದೇಶನ, ನಾ.ಶ್ರೀನಿವಾಸ ಪಾಪು ರಚನೆಯ ಕನಸಿನವರು ನಾಟಕ ಪ್ರದರ್ಶಿಸಿದರು.