ಏಕಾಏಕಿ ಗುಡಿಸಲು ನೆಲಸಮ ಆರೋಪ

ಏಕಾಏಕಿ ಗುಡಿಸಲು ನೆಲಸಮ ಆರೋಪ
Published on

ಹಾಸನ: ಆಲೂರು ತಾಲೂಕು ಪಾಳ್ಯ ಹೋಬಳಿ ದಿಂಡಘಟ್ಟ ಗ್ರಾಮದ ಸರ್ವೆ ನಂಬರ್ 1 ರಲ್ಲಿ ವಾಸವಿದ್ದ ಗುಡಿಸಲು ಮನೆಗಳನ್ನು ಜೆ.ಸಿ.ಬಿ ಯಂತ್ರದಿಂದ ದ್ವಂಸ ಮಾಡಿದ್ದು, ನಮಗೆ ವಾಸಕ್ಕೆ ಯಾವುದೇ ಮನೆ ಇಲ್ಲದಂತಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಂಡು ನಮಗೆ ರಕ್ಷಣೆ ಕೊಡಿಸುವಂತೆ ಸಂತ್ರಸ್ತರು ಮನವಿ ಮಾಡಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ರೂಪ, ಕೀರ್ತಿ, ಉದಯಕುಮಾರ್, ರಾಜೇಶ್, ಶ್ರುತಿ ಮೊದಲಾದವರು, ಗ್ರಾಮದ ಸರ್ವೆ ನಂ.1 ರಲ್ಲಿ ನಾವು ಗುಡಿಸಲು ನಿರ್ಮಿಸಿಕೊಂಡು ಕಳೆದ 30 ವರ್ಷಗಳಿಂದ ವಾಸವಿದ್ದೇವೆ. ಇದರ ಬಗ್ಗೆ ವಾಸಸ್ಥಳ ದೃಢೀಕರಣ ಪತ್ರ ಸಹ ಪಡೆದಿದ್ದೇವೆ. ಸದರಿ ದೃಢೀಕರಣ ಪತ್ರದ ಸಂಖ್ಯೆ ಪಡೆದುಕೊಂಡಿರುತ್ತೇವೆೆ. ಕಂದಾಯವನ್ನು ಪಾವತಿಸಿರುತ್ತೇವೆ.
ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ನಾಗಿಸುತ್ತಿದ್ದು, ಗುಡಿಸಲು ಬಿಟ್ಟರೆ ನಮ್ಮ ಕುಟುಂಬದ ವಾಸಕ್ಕೆ ಯಾವುದೇ ವಸತಿ ಸೌಕರ್ಯ ಇಲ್ಲ. ಎಂದಿನಂತೆ ಕೂಲಿ ಕೆಲಸಕ್ಕೆ ಮನೆಯಿಂದ ಹೊರಹೋಗಿದ್ದ ಸಂದರ್ಭದಲ್ಲಿ ಸಾಯಂಕಾಲ ಸುಮಾರು 4.30 ಯಿಂದ 5 ಗಂಟೆಯಲ್ಲಿ ಪಾಳ್ಯ ಪಂಚಾಯ್ತಿಯಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿರುವ ಸಚಿನ್, ವಾಟರ್ ಮ್ಯಾನ್ ಚಿಂದನ್, ಪಾಳ್ಯ ಪಂಚಾಯ್ತಿಯ ಹಾಲಿ ಅಧ್ಯಕ್ಷರ ಪತಿ ಕೆ.ಎಂ. ಪುರುಷೋತ್ತಂ ಹಾಗೂ ಇವರ ಜೊತೆ ಇನ್ನೂ 5 ರಿಂದ 6 ಜನಗಳ ಗುಂಪನ್ನು ಕಟ್ಟಿಕೊಂಡು ಸೇರಿ 2 ಕಾರಿನಲ್ಲಿ ಬಂದು 2 ಜೆ.ಸಿ.ಬಿ ಯಂತ್ರವನ್ನು ತಂದು ನಮ್ಮ ಗುಡಿಸಲು ನೆಲಸಮ ಮಾಡಿದ್ದಾರೆ. ಈ ಸಮಯದಲ್ಲಿ ಅಕ್ಕ-ಪಕ್ಕದವರು ನಮಗೆ ಕರೆಮಾಡಿ ತಿಳಿಸಿದ್ದು, ನಾವು ಸ್ಥಳಕ್ಕೆ ಬಂದ ಸಮಯದಲ್ಲಿ ನೀವು ಇಲ್ಲಿದ್ದರೆ ನಿಮ್ಮನ್ನೂ ಕೊಲ್ಲುತ್ತೇವೆಂದು ಹೆದರಿಸಿ ಹೋಗಿದ್ದಾರೆ ಎಂದರು.
ನಮ್ಮ ಕುಟುಂಬಗಳಿಗೆ ವಾಸಕ್ಕೆ ಯಾವುದೇ ಮನೆಯಿಲ್ಲದಂತಾಗಿರುವುದರಿಂದ ನಮಗೆ ದಿಕ್ಕು ತೋಚದಂತಾಗಿದ್ದು, ದಯವಿಟ್ಟು ಇವರ ಮೇಲೆ ಸೂಕ್ತ ಕಾನೂನು ಜರುಗಿಸಿ ನಮಗೆ ಇವರಿಂದ ರಕ್ಷಣೆ ಕೊಡಿಸಿಕೊಡಬೇಕಾಗಿ ಮನವಿ ಮಾಡಿದರು. ಅಲ್ಲದೆ ಹೊಸ ಮನೆ ಕಟ್ಟಲೂ ಸ್ಥಳೀಯ ಗ್ರಾಪಂ ನಿಂದ ಎನ್‌ಒಸಿ ನೀಡುತ್ತಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net