

ಎಚ್.ಡಿ.ಕೋಟೆ: ತಾಲೂಕಿನ ಸೊಳ್ಳೆಪುರ ಹಾಡಿಯಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಗೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರು ತಿಂಗಳಿಂದ ಮಕ್ಕಳಿಗೆ ಮೂಲ ಸೌಕರ್ಯ ದೊರಕದಿರುವ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಮುಂದಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಸತಿ ಶಾಲೆಯಲ್ಲಿ 384 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಆರು ತಿಂಗಳಿಂದ ಮಕ್ಕಳಿಗೆ ದಿನಬಳಕೆಗೆ ಬೇಕಾದ ಸೋಪು, ಬ್ರಷ್, ಪೇಸ್ಟ್, ಹೆಣ್ಣುಮಕ್ಕಳ ವೈಯಕ್ತಿಕ ಸ್ವಚ್ಛತಾ ಕಿಟ್, ಹಾಸಿಗೆ, ದಿಂಬು, ರಗ್ಗು ಮತ್ತಿತರ ವಸ್ತುಗಳನ್ನು ನೀಡಲಾಗುತ್ತಿರಲಿಲ್ಲ. ಈ ಬಗ್ಗೆ ಮಕ್ಕಳು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿರಲಿಲ್ಲ.
ಇದೀಗ ಪಾಲಕರು ಮಕ್ಕಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವ ವಿಚಾರ ತಿಳಿದು ತಹಸೀಲ್ದಾರ್ ಶ್ರೀನಿವಾಸ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಪ್ರಾಂಶುಪಾಲ ರಾಕೇಶ್ ಚಂದ್ರವರ್ಮ ಅವರಿಂದ ಸಂಪೂರ್ಣ ಮಾಹಿತಿ ಪಡೆದರು.
ನಂತರ ತಹಸೀಲ್ದಾರ್ ಜಿಲ್ಲಾ ಗಿರಿಜನ ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಒಂದು ವಾರದೊಳಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪಾಠ-ಪ್ರವಚನ ಉತ್ತಮವಾಗಿ ನಡೆಯುತ್ತಿದೆ. ಆದರೆ ದಿನಬಳಕೆಗೆ ಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಆದ್ದರಿಂದ ಮನೆಯಿಂದಲೇ ತಟ್ಟೆ, ಲೋಟ, ಹೊದಿಕೆ, ಚಾಪೆ, ದಿಂಬು ತರುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ನಂತರ ತಾಲೂಕು ಅರೋಗ್ಯಾಧಿಕಾರಿ ಡಾ.ರವಿಕುಮಾರ್, ವಸತಿ ಶಾಲೆಯಲ್ಲಿನ ಅಡುಗೆ ಕೋಣೆಗೆ ತೆರಳಿ ಊಟದ ವ್ಯವಸ್ಥೆ ಪರಿಶೀಲಿಸಿದರು.
ಮಕ್ಕಳ ಪಾಲಕರಾದ ಜಿ.ಸ್ವಾಮಿ, ಸಿದ್ದರಾಜು, ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಪುಟ್ಟಬಸವಯ್ಯ, ವಾರ್ಡನ್ ಆರತಿ, ಸಂತೋಷ್‌ಕುಮಾರ್, ಸಿಬ್ಬಂದಿ ಲೋಕೇಶ್, ರವೀಶ್, ಅಜಯ್ ಇತರರು ಹಾಜರಿದ್ದರು.