ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಮನವಿ

15 YLP 03
Published on

ಯಲ್ಲಾಪುರ: ಎಪಿಎಂಸಿ ಮಾರುಕಟ್ಟೆ ಶುಲ್ಕ ರದ್ದುಗೊಳಿಸಿ ಮಾರುಕಟ್ಟೆಯ ಒಳಗೂ ಹೊರಗೂ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅಡಕೆ ವ್ಯವಹಾರಸ್ಥರ ಸಂಘದ ಪ್ರಮುಖರು ಬುಧವಾರ ತಹಸೀಲ್ದಾರ್ ಡಿ. ಜಿ. ಹೆಗಡೆ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಪ್ರಕಾರ, ರೈತರು ಬೆಳೆದ ಉತ್ಪನ್ನಗಳನ್ನು ತಮ್ಮ ಇಚ್ಛೆಯಂತೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಎಪಿಎಂಸಿ ಆವರಣದ ಹೊರಗೆ ರೈತರ ಉತ್ಪನ್ನಗಳನ್ನು ಖರೀದಿಸುವ ವರ್ತಕರು ಮಾರುಕಟ್ಟೆ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಎಪಿಎಂಸಿ ಆವರಣದ ಒಳಗೆ ನಡೆಯುವ ವ್ಯಾಪಾರ ವಹಿವಾಟುಗಳಿಗೆ ಶೇ.1 ರಷ್ಟು ಎಪಿಎಂಸಿ ತೆರಿಗೆ ಪಾವತಿಸಬೇಕಾಗುತ್ತದೆ. ಈಗಿರುವ ವ್ಯವಸ್ಥೆಯಂತೆ ಮಾರುಕಟ್ಟೆಯ ಒಳಗೆ ಮಾತ್ರ ಶುಲ್ಕ ಪಾವತಿಸುವ ಕ್ರಮ ಮುಂದುವರಿದಲ್ಲಿ ಎಪಿಎಂಸಿ ಆವರಣದೊಳಗಿನ ವರ್ತಕರೂ ಕೂಡ ಹೊರ ಹೋಗುವುದು ಅನಿವಾರ್ಯವಾಗುತ್ತದೆ. ಹಾಗಾದರೆ ಎಪಿಎಂಸಿ ವ್ಯವಸ್ಥೆ ಶಾಶ್ವತವಾಗಿ ಮುಚ್ಚಿಹೋಗುವ ಅಪಾಯವಿದೆ. ಅದನ್ನು ತಡೆಯಲು ಮಾರುಕಟ್ಟೆ ಶುಲ್ಕವನ್ನು ರದ್ದುಗೊಳಿಸಿ, ಎಪಿಎಂಸಿ ಒಳಗೂ ಹೊರಗೂ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳಿಸಬೇಕು. ಎಪಿಎಂಸಿ ವ್ಯವಸ್ಥೆ ಮೇಲೆ ಅವಲಂಬಿತವಾಗಿರುವ ರೈತರು, ಕಾರ್ವಿುಕರು, ದಲಾಲರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಜಾರಿಗೊಳಿಸುವಂತೆ ಆಗ್ರಹಿಸಿದರು.

ಸರ್ಕಾರ ಈ ಬೇಡಿಕೆಗೆ ಸ್ಪಂದಿಸುವವರೆಗೆ ಅನಿರ್ದಿಷ್ಟಾವಧಿ ಅಡಕೆ ವ್ಯವಹಾರ ಬಂದ್ ಮಾಡುವುದಾಗಿ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ ತಿಳಿಸಿದ್ದಾರೆ. ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ಭಟ್ಟ ಕೋಣೆಮನೆ, ವರ್ತಕರಾದ ಡಿ. ಶಂಕರ ಭಟ್ಟ, ರವಿ ಹೆಗಡೆ, ಸುಬ್ರಹ್ಮಣ್ಯ ಹೆಗಡೆ, ಜಿ. ಎನ್. ಗಾಂವ್ಕಾರ, ಸುರೇಶ ಹೆಗಡೆ, ಗಿರೀಶ ಭಟ್ಟ, ನರಸಿಂಹ ಭಟ್ಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net