ಏಕರೂಪ ನಾಗರೀಕ ಸಂಹಿತೆ ಜಾರಿಗೆ ವಿರೋಧಿಸಿ ಮುಸ್ಲಿಂ ಒಕ್ಕೂಟದ ಪ್ರತಿಭಟನೆ

IMG-20230702-WA0062.jpg
Published on

ದಾವಣಗೆರೆ: ಏಕರೂಪ ನಾಗರೀಕ ಸಂಹಿತೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ವಿರೋಧಿಸಿರುವ ದಾವಣಗೆರೆ ಮುಸ್ಲಿಂ ಒಕ್ಕೂಟ ಆಜಾದ್‌ನಗರದ ಮುಖ್ಯರಸ್ತೆಯಲ್ಲಿ ಭಾನುವಾರ ಸಾಂಕೇತಿಕ ಪ್ರತಿಭಟನೆ ನಡೆಸಿತು.

ನಾನು ಏಕರೂಪ ನಾಗರೀಕ ಸಂಹಿತೆಯನ್ನು ತಿರಸ್ಕರಿಸುತ್ತೇನೆ ಎಂಬ ಬರಹದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದ ಒಕ್ಕೂಟದ ಪದಾಧಿಕಾರಿಗಳು, ಉದ್ದೇಶಿತ ಸಂಹಿತೆ ವಿರುದ್ಧ ಘೋಷಣೆ ಕೂಗಿ ಕಿಡಿ ಕಾರಿದರು.

ಒಕ್ಕೂಟದ ಸಂಚಾಲಕ, ವಕೀಲ ನಜೀರ್ ಅಹಮ್ಮದ್ ಮಾತನಾಡಿ ಕೇಂದ್ರ ಸರ್ಕಾರ ಮೊದಲು ಭಾರತದಲ್ಲಿ ಪರಿಹರಿಸಲಾಗದೆ ಉಳಿದ ಅನೇಕ ಸಮಸ್ಯೆಗಳನ್ನು ಬಗೆಹರಿಸಲಿ. ಅದನ್ನು ಬಿಟ್ಟು ಏಕರೂಪ ನಾಗರೀಕ ಸಂಹಿತೆ ವಿಚಾರವಾಗಿ ವಿನಾಕಾರಣ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಮುಸ್ಲಿಮರು ಅಡ್ಡಿ, ಆತಂಕವಿಲ್ಲದೇ ಉತ್ತಮ ಜೀವನ ನಡೆಸುತ್ತಿರುವಾಗ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ, ಸಮಸ್ಯೆ ತಂದಿಡುವುದು ಸರಿಯಲ್ಲ. ಮುಸ್ಲಿಮರಿಗೆ ಸಂವಿಧಾನ ನೀಡಿರುವ ವಿಶೇಷ ವೈಯಕ್ತಿಕ ಕಾನೂನಿನ ಮೇಲೆ ಸವಾರಿ ಮಾಡಲು ಹೊರಟಂತಿದೆ ಎಂದು ಆರೋಪಿಸಿದರು.

ಒಕ್ಕೂಟದ ಸಂಚಾಲಕ ಟಿ.ಅಸ್ಗರ್ ಮಾತನಾಡಿ, ದೇಶದಲ್ಲಿ ಬಡವರು, ಶ್ರೀಮಂತರೆಂಬ ಭೇದವಿಲ್ಲದೇ, ದೇಶದಲ್ಲಿ ಏಕರೂಪ ಶಿಕ್ಷಣ ಸಿಗಲಿ. ಎಲ್ಲಾ ನಾಗರೀಕರಿಗೂ ಒಂದೇ ರೀತಿಯ ಆಸ್ಪತ್ರೆಗಳ ವ್ಯವಸ್ಥೆ ಕಲ್ಪಿಸಲಿ ಎಂದು ಆಗ್ರಹಿಸಿದರು.

ಮುಸ್ಲಿಂ ಒಕ್ಕೂಟದ ಮುಖಂಡರಾದ ಮಹಮ್ಮದ್ ಶೋಯಬ್, ನಿಜಾಮುದ್ದೀನ್, ನೂರ್ ಅಹಮದ್, ಇಬ್ರಾಹಿಂ ಖಲೀಲುಲ್ಲಾ, ಅಕ್ತರ್ ಮುನ್ನಾ, ಐ.ಕೆ.ಮುನ್ನಾ ಸಾಬ್, ಅಕ್ರಂ, ಖಲೀಂವುಲ್ಲಾ ಖಾನ್, ಮಸೂದ್ ಅಹ್ಮದ್, ಹನೀಫ್‌ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net