ಏಕರೂಪ ನಾಗರಿಕ ಸಂಹಿತೆಯಿಂದ ಆದಿವಾಸಿಗಳ ಸಾಂಸ್ಕೃತಿಕ ವೈವಿಧ್ಯತೆಗೆ ಧಕ್ಕೆ

22
Published on

ಮೈಸೂರು: ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಯಿಂದ ದೇಶದಲ್ಲಿರುವ ಆದಿವಾಸಿಗಳ ಸಾಂಸ್ಕೃತಿಕ ವೈವಿಧ್ಯತೆಗೆ ಧಕ್ಕೆ ಆಗಲಿದೆ ಎಂದು ಹುಣಸೂರಿನ ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಅಭಿಪ್ರಾಯಪಟ್ಟರು.


ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಆತ್ಮನಿರ್ಭರ ಭಾರತ: ಭಾರತದ ಆದಿವಾಸಿಗಳ ಜನಾಂಗೀಯ, ಪರಿಸರ ಮತ್ತು ಆರ್ಥಿಕ ಪರಿವರ್ತನೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಆದಿವಾಸಿಗಳ ಬದುಕು ಮತ್ತು ಸಂಸ್ಕೃತಿ ವಿಭಿನ್ನ. ಅವರ ಆಹಾರ ಪದ್ಧತಿ, ಆಚರಣೆ, ಸಾಂಸ್ಕೃತಿಕ ಹಿನ್ನೆಲೆ, ಪರಂಪರೆ ಸಹ ವಿಶಿಷ್ಟವಾಗಿದೆ. ಆದರೆ, ಕೇಂದ್ರ ಸರ್ಕಾರವು ಜಾರಿಗೆ ಚಿಂತನೆ ನಡೆಸಿರುವ ಏಕರೂಪ ನಾಗರಿಕ ಸಂಹಿತೆಯಿಂದ ಆದಿವಾಸಿಗಳ ಸಂಸ್ಕೃತಿ ದಮನವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಒಂದು ದೇಶ, ಒಂದು ಸಂಸ್ಕೃತಿ, ಒಂದು ಭಾಷೆ, ಒಂದು ಆಚರಣೆಯನ್ನು ದೇಶದಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಅದರ ಮುಂದುವರಿದ ಭಾಗ ಏಕರೂಪ ನಾಗರಿಕ ಸಂಹಿತೆ ಆಗಿದೆ. ಆದರೆ, ಬಹುಸಂಸ್ಕೃತಿಯ ಹಿನ್ನೆಲೆಯ ಭಾರತಕ್ಕೆ ಇದು ಹೊಂದಾಣಿಕೆಯಾಗಲ್ಲ ಎಂದರು.
ಆದಿವಾಸಿಗಳಿಗೆ ಸರ್ಕಾರ ಕಲ್ಪಿಸಿಕೊಟ್ಟಿರುವ ಸೌಲಭ್ಯಗಳಿಂದ ಅನ್ಯ ಸಮುದಾಯವರಿಗೆ ಹೊಟ್ಟೆಕಿಚ್ಚು ಬಂದಿದೆ.

ಹೀಗಾಗಿ, ಆದಿವಾಸಿ ಗುಂಪಿಗೆ ಸೇರಲು ಬಹಳಷ್ಟು ಸಮುದಾಯಗಳು ಪೈಪೋಟಿಗೆ ಬಿದ್ದಿವೆ. ದೇಶವನ್ನು ಆತ್ಮನಿರ್ಭರ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಆದರೆ, ಸ್ವಾತಂತ್ರೃ ಬಂದು 75 ವರ್ಷವಾದರೂ ಆದಿವಾಸಿಗಳು ಇನ್ನೂ ಆತ್ಮನಿರ್ಭರವಾಗಿಲ್ಲ. ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಅವರನ್ನು ಅರಣ್ಯದಲ್ಲೂ ಇರಲು ಬಿಡುತ್ತಿಲ್ಲ ಎಂದು ಕಿಡಿಕಾರಿದರು.


ರಾಜಕೀಯ ಮೀಸಲಾತಿ ಲಾಭ ಇನ್ನೂ ಆದಿವಾಸಿಗಳಿಗೆ ತಲುಪಿಲ್ಲ. ಅವರ ಸಮುದಾಯವನ್ನು ಪ್ರತಿನಿಧಿಸುವ ಒಬ್ಬ ಶಾಸಕರಿಲ್ಲ. ಆದಿವಾಸಿಗಳು ಸೇರಿದಂತೆ ಪರಿಶಿಷ್ಟ ಪಂಗಡದವರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ರಾಜಕೀಯ ಮೀಸಲಾತಿ ಸೌಲಭ್ಯ ಅನ್ಯರಿಗೆ ಅನುಕೂಲವಾಗಿದೆ. ಇವರಿಗೆ ಏನೂ ಪ್ರಯೋಜನವಾಗಿಲ್ಲ. ಆದಿವಾಸಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಯಾವುದೇ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಉದ್ಯೋಗ ಮೀಸಲಾತಿ ಲಾಭ ಬುಡಕಟ್ಟು ಜನರಿಗೆ ಸಿಕ್ಕಿಲ್ಲ. ಈ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇದರಿಂದಾಗಿ ಅತಂತ್ರ ಜೀವನ ನಡೆಸುತ್ತಿದ್ದಾರೆ. ಇತ್ತ ಅರಣ್ಯದಲ್ಲಿ ಇರಲು, ಅತ್ತ ಸಮಾಜದ ನಡುವೆ ಬದುಕಲು ಆಗುತ್ತಿಲ್ಲ ಎಂದರು.


ಭೂ ಸಂರಕ್ಷಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಆದಿವಾಸಿಗಳ ಭೂಮಿಯನ್ನು ರಕ್ಷಣೆ ಮಾಡಬೇಕಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಆದಿವಾಸಿಗಳ ಭಾಷೆ ಕಲಿಕೆಗೆ ಅವಕಾಶವಿಲ್ಲ. ಇದು ಸರಿಯಲ್ಲ. ಕನ್ನಡ ಭಾಷೆಯೊಂದಿಗೆ ನಾಲ್ಕು ಬುಡಕಟ್ಟು ಭಾಷೆಗಳಲ್ಲಿ ಅಧ್ಯಯನ ಮಾಡಲು ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಬೇಕಿದೆ ಎಂದರು.


ಆದಿವಾಸಿಗಳು ಅರಣ್ಯದಲ್ಲಿ ಇರಬೇಕೇ ಅಥವಾ ಅರಣ್ಯದ ಹೊರಗೆ ಇರಬೇಕೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆದರೆ, ಅವರ ಸ್ವಂತ ನೆಲೆವಾದ ಕಾಡನ್ನು ಬಿಟ್ಟು ಏಕೆ ಹೊರಗೆ ಬರಬೇಕು? ಅವರು ಅಲ್ಲೇ ವಾಸ ಮಾಡಲು ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡುವ ಪ್ರೊ.ಮುಜಾಫರ್ ಅಸ್ಸಾದಿ ವರದಿಯನ್ನು ಯಥಾವತ್ ಜಾರಿ ತರಬೇಕಿದೆ ಎಂದು ಆಗ್ರಹಿಸಿದರು.


ನಿವೃತ್ತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ದಿ ಇನ್‌ಸ್ಟಿಟ್ಯೂಟ್ ಆಫ್ ಡಜುಕೇಷನ್ ಟ್ರಸ್ಟ್‌ನ ಚೇರ‌್ಮನ್ ಡಾ.ಎಂ.ಪುಟ್ಟಸ್ವಾಮಿ, ಕಾರ್ಯದರ್ಶಿ ಕುಬೇರ್ ಪಿ.ಗೌಡ್, ಟ್ರಸ್ಟಿ ಎಸ್.ಪ್ರಭಾ, ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ, ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ, ಡಾ.ಡಿ.ಸಿ.ನಂಜುಂಡ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net