ಏಕರೂಪ ನಾಗರಿಕ ಸಂಹಿತೆ ಜಾರಿ ಅಗತ್ಯ: ಹೈಕೋಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಆಶಯ

1
Published on

ಮೈಸೂರು: ಭಾರತದ ಹೆಣ್ಣು ಮಕ್ಕಳಿಗೆ ಅದರಲ್ಲೂ ಮುಸ್ಲಿಂ ಮಹಿಳೆಯರನ್ನು ಧಾರ್ಮಿಕ ಸಂಕೋಲೆಗಳಿಂದ ಬಿಡುಗಡೆ ನೀಡಬಹುದಾದ ಏಕರೂಪ ನಾಗರಿಕ ಸಂಹಿತೆಯ ಕುರಿತು ನಾವು ಇನ್ನು ಮುಂದಾದರೂ ಗಂಭೀರ ಚರ್ಚೆ ಮಾಡಬೇಕಿದೆ ಎಂದು ಹೈಕೋಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಅಭಿಪ್ರಾಯಪಟ್ಟರು.
ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ರಾಜಕಾರಣಿ, ಶಿಕ್ಷಣ ತಜ್ಞ ಕೆ.ಪುಟ್ಟಸ್ವಾಮಿ ನೆನಪಿನ ನಾಲ್ಕನೇ ದತ್ತಿ ಉಪನ್ಯಾಸದಲ್ಲಿ ಏಕರೂಪ ನಾಗರಿಕ ಸಂಹಿತೆ -ಸಂವಿಧಾನಾತ್ಮಕ ಆದೇಶ ವಿಷಯವಾಗಿ ಮಾತನಾಡಿದರು.
ದೇಶದಲ್ಲಿ ಈಗ ಏಕರೂಪ ನಾಗರಿಕ ಸಂಹಿತೆಯ ಜಾರಿ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಸಂಹಿತೆಯ ಕುರಿತು ನಮಗೆ ಎಲ್ಲವೂ ತಿಳಿದಿದೆ ಎನ್ನುವವರು ಮತ್ತು ತಿಳಿದಿಲ್ಲ ಎನ್ನುವವರ ನಡುವೆ ಈಗ ಗೊಂದಲ, ಆತಂಕಗಳು ಮನೆಮಾಡಿವೆ. ಇಂತಹ ಗೊಂದಲ ಆತಂಕಗಳಿಗೆ ಕಾನೂನು, ಸಂವಿಧಾನ ಬಲ್ಲವರು ಸರಿಯಾದ ಉತ್ತರ ನೀಡಲು ಹಿಂಜರಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.
ಒಂದು ದೇಶ- ಒಂದು ಸಿದ್ಧಾಂತ ಎಂಬುದು ಭಾರತದ ನಿಲುವಾಗಿತ್ತು. ಹೀಗಾಗಿಯೇ ಇವತ್ತಿಗೂ ಪಾಕಿಸ್ತಾನ ಧರ್ಮದ ಮೇಲೆ ನಿಂತಿದ್ದರೆ, ಭಾರತ ಜಾತ್ಯತೀತ ಸಿದ್ಧಾಂತದ ಮೇಲೆ ನಿಂತಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳು ಭಾರತ ಸಂವಿಧಾನದ ಶಕ್ತಿ. ಇಷ್ಟರ ನಡುವೆಯೂ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ಆ ಧರ್ಮದ ಮಹಿಳೆಯೇ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದನ್ನು ನಾವು ಈಗಲೂ ಕಾಣಬಹುದಾಗಿದೆ. ಈ ಎಲ್ಲ ಬಿಕ್ಕಟ್ಟಿಗೂ ಏಕರೂಪ ನಾಗರಿಕ ಸಂಹಿತೆ ಒಂದು ಪರಿಹಾರದ ಸಾಧನ ಎಂದು ಅಭಿಪ್ರಾಯಪಟ್ಟರು.

ಗಂಭೀರ ಚರ್ಚೆಗಳಾಗಲಿ:
ದೇಶದ ಹೆಣ್ಣು ಮಕ್ಕಳ ಧಾರ್ಮಿಕ ಸಂಕೋಲೆಗಳಿಗೆ ಏಕರೂಪ ನಾಗರಿಕ ಸಂಹಿತೆ ಬಿಡುಗಡೆ ನೀಡಬಹುದಾಗಿದೆ. ಈ ಕುರಿತು ಗಂಭೀರ ಚರ್ಚೆಗಳು ಅಗುತ್ತಿಲ್ಲ. ಇನ್ನು ಮುಂದಾದರೂ ಇತ್ತ ಗಮನ ಹರಿಸಬೇಕು. ಭಾರತ ಸಂವಿಧಾನ ನಮಗೆಲ್ಲಾ ಸಾಕೆನಿಸುವಷ್ಟು ಹಕ್ಕುಗಳನ್ನು ಕೊಟ್ಟಿದ್ದರೂ ನಾವು ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ನಮ್ಮ ಕರ್ತವ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ರಾಷ್ಟ್ರ ನಾಯಕರಲ್ಲಿ ಬಹುತೇಕರು ಕಾನೂನು ಜ್ಞಾನವಿದ್ದ ವಕೀಲರಾಗಿದ್ದರು. ಹೀಗಾಗಿ ಗಟ್ಟಿಯಾಗಿ ದೇಶ ಕಟ್ಟಲು ಇದು ನೆರವಾಯಿತು. ಅಂತಹ ಗಟ್ಟಿತನ ಮುಂದೆಯೂ ಮುಂದುವರಿಯಬೇಕು. ಹಲವು ಧರ್ಮ, ಮತ, ಜಾತಿಗಳಿರುವ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಚರ್ಚೆಯಲ್ಲಿ ಸಂವಿಧಾನದ ಆಶಯ ಅಡಗಿದೆ. ಕೇಂದ್ರದ ಕಾನೂನು ಆಯೋಗವು ಸಂಗ್ರಹಿಸಿ ಸಲಹೆಯಲ್ಲಿ ಕೆಲ ತಜ್ಞರು ಯಾವ ಕಾರಣಕ್ಕೂ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲೇಬಾರದು ಎಂದು ಸಲಹೆಗಳನ್ನು ನೀಡಿದ್ದಾರೆ. ಸರಿಯಾದ ಚರ್ಚೆಯನ್ನೇ ಮಾಡದೆ ಈ ರೀತಿ ಸಲಹೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದೇಶ ಛಿತ್ರವಾಯಿತು:
ಭಾರತವನ್ನು 800 ವರ್ಷಗಳು ಮೊಘಲರು ಹಾಗೂ 200 ವರ್ಷಗಳ ಕಾಲ ಬ್ರಿಟಿಷರು ಆಳ್ವಿಕೆ ಮಾಡಿದ್ದಾರೆ. ಇಷ್ಟಕ್ಕೆ ನಾವು ನಮ್ಮ ಇತಿಹಾಸವನ್ನು ಬರಿಯ ಸಾವಿರ ವರ್ಷಗಳಿಗೆ ಮಿತಿಗೊಳಿಸಿಕೊಳ್ಳುವುದು ತಪ್ಪಲ್ಲವೇ? ಮೊಘಲರಿಂದಾಗದ ಭಾರತದ ಛಿದ್ರತೆಯನ್ನು ಮಾಡಿದ್ದು ಬ್ರಿಟಿಷರು ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೀಪು, ಕಾನೂನು ಅಧ್ಯಯನದ ನಿರ್ದೇಶಕ ಪ್ರೊ.ಕೆ.ಬಿ. ವಾಸುದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net