

ಚಿತ್ರದುರ್ಗ: ಐತಿಹಾಸಿಕ ಕೋಟೆನಗರಿಯ ನವದುರ್ಗೆಯರಲ್ಲಿ ಪ್ರಮುಖರಾದ ಏಕನಾಥೇಶ್ವರಿ, ಬರಗೇರಮ್ಮ ಶಕ್ತಿದೇವತೆಗಳ ಎತ್ತಿನಗಾಡಿ ರಥೋತ್ಸವ ಮೆರವಣಿಗೆಯೂ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮೆರವಣಿಗೆ ಅಂಗವಾಗಿ ಪ್ರೀತಿ, ವಾತ್ಸಲ್ಯದ ಅಕ್ಕ-ತಂಗಿಯರಾದ ದೇವಿಯರ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪ, ಡ್ರೈ ಫ್ರೂಟ್ಸ್ ಒಳಗೊಂಡು ಅತ್ಯಾಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕಾರ ಸೇವೆ ನೆರವೇರಿತು. ನಂತರ ಅಶ್ವವಾಹನರೂಢ ಸುಸಜ್ಜಿತ ಉಚ್ಛಾಯದಲ್ಲಿ ಕಂಗೊಳಿಸುತ್ತಿದ್ದ ದೇವತೆಗಳನ್ನು ಜೋಡೆತ್ತು ಗಾಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.
ಕೋಟೆ ರಸ್ತೆಯ ಪಾದದ ಗುಡಿ ಮುಂಭಾಗದಲ್ಲಿ ಏಕನಾಥೇಶ್ವರಿ ಹಾಗೂ ಬರಗೇರಮ್ಮ ದೇವಿಯ ಮೂಲ ಸನ್ನಿಧಾನದ ಮುಂಭಾಗದಲ್ಲಿ ದೇವಿಯ ಸಿಡಿ ಮಹೋತ್ಸವವೂ ಈ ಬಾರಿ ಮೇ 4ರಂದು ಸಂಜೆ 6ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಈ ಉತ್ಸವದ ಹಿಂದಿನ ದಿನ ಅಂದರೆ ಶುಕ್ರವಾರವೇ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ಅದರಂತೆ ಈ ಬಾರಿಯೂ ಹಿಂದಿನ ವರ್ಷಕ್ಕಿಂತಲೂ ಕಳೆಗಟ್ಟಿತ್ತು.
ಕಹಳೆ, ಡೊಳ್ಳು, ಉರುಮೆ, ತಮಟೆ, ನಗಾರಿ ಸೇರಿ ವಿವಿಧ ಜನಪದ ಕಲಾತಂಡಗಳೊಂದಿಗೆ ಸಂಚರಿಸಿದ ಮೆರವಣಿಗೆಯಲ್ಲಿ ಅಧಿದೇವತೆ ಏಕನಾಥೇಶ್ವರಿಗೆ ಜೈ, ಬರಗೇರಮ್ಮ ದೇವಿಗೆ ಜೈ, ಉಧೋ ಉಧೋ ಎಂಬ ಹರ್ಷೋದ್ಗಾರ ಮೊಳಗಿದವು. ಭಕ್ತೋತ್ಸಾಹ ಮುಗಿಲುಮುಟ್ಟಿತು. ಸುಡು ಬಿಸಿಲು ಲೆಕ್ಕಿಸದೆ ನೂರಾರು ಯುವಕರು, ಬಾಲಕರು ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು.
ಏಕನಾಥೇಶ್ವರಿ ದೇವಿಯ ಮೆರವಣಿಗೆಯು ಕೋಟೆ ರಸ್ತೆಯಿಂದ ಆರಂಭವಾಗಿ ಆನೆಬಾಗಿಲು, ಬುರುಜನಹಟ್ಟಿ, ಗಾಯತ್ರಿ, ಗಾಂಧಿ, ಎಸ್‌ಬಿಐ ವೃತ್ತ, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಜಟ್‌ಪಟ್ ನಗರ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ರಸ್ತೆಯಲ್ಲಿ ಸಂಚರಿಸಿ ರಾತ್ರಿ 10ರಿಂದ 10.30ರೊಳಗೆ ಪಾದದ ಗುಡಿಗೆ ಕರೆತರಲಾಯಿತು.
ಅದೇ ರೀತಿ ಬರಗೇರಮ್ಮ ದೇವಿಯ ಮೆರವಣಿಗೆ ಮೂಲ ದೇಗುಲದಿಂದ ಆರಂಭವಾಗಿ ಹೊಳಲ್ಕೆರೆ ರಸ್ತೆ, ಗೌರಸಂದ್ರ ಮಾರಮ್ಮ ದೇಗುಲ, ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಡಿ.ರಸ್ತೆ, ರಂಗಯ್ಯನ ಬಾಗಿಲು, ಉಜ್ಜಯನಿ ಮಠದ ರಸ್ತೆ, ಕೂಡಲೀ ಶೃಂಗೇರಿ ಮಹಾಸಂಸ್ಥಾನ ಶಾಖಾ ಮಠ, ಉಚ್ಚಂಗಿಯಲ್ಲಮ್ಮ ದೇವಿ ದೇಗುಲ, ಚಿಕ್ಕಪೇಟೆ ಸೇರಿ ನಗರದ ರಾಜಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಎರಡೂ ದೇವತೆಗಳಿಗೆ ಪಾನಕ ಪರಿಹಾರ ಹೆಡೆ ಬಿಡಾರ ಹಿಟ್ಟಿನ ಆರತಿ ಸೇವೆ ನೆರವೇರಿತು.
ತಹಸೀಲ್ದಾರ್ ಭಾಗಿ: ಜೋಡೆತ್ತು ರಥ ಸಾಗಿದ ಮಾರ್ಗಗಳಲ್ಲಿ ಭಕ್ತರು ನೀರೆರಚುವ ಮೂಲಕ ಸ್ವಾಗತಿಸಿದರು. ಪೂಜೆ ಸ್ವೀಕರಿಸಿದ ನಂತರ ದೇಗುಲ ತಲುಪಿತು. ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಕೂಡ ಮಗುವಿನೊಂದಿಗೆ ಮೆರವಣಿಗೆಯಲ್ಲಿ ಕೆಲಕಾಲ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಡ್ರೈ-ಫ್ರೂಟ್ಸ್ ಅಲಂಕಾರದಲ್ಲಿ ಬರಗೇರಮ್ಮ: ಬರಗೇರಮ್ಮ ದೇವಿಯ ಅಲಂಕಾರ ಈ ಬಾರಿ ಅತ್ಯಂತ ವಿಶೇಷವಾಗಿತ್ತು. ಮೂರು ದಿನಗಳಿಂದಲೂ ದೇಗುಲದಲ್ಲಿ ಇದಕ್ಕಾಗಿ ಭರದ ಸಿದ್ಧತೆಗಳು ನಡೆದವು. ಸಾವಿರಾರು ಗೋಡಂಬಿ, ಬಾದಾಮಿ, ಉತ್ತುತ್ತಿ, ಅಂಜುರಾ, ಚೆರ‌್ರಿ ಹಣ್ಣು, ಕಮಲದ ಹೂ ಸೇರಿ ವಿವಿಧ ವರ್ಣದ ಪುಷ್ಪಗಳಿಂದ ದುರ್ಗಾ ಮಾತೆ ಮಾದರಿಯಲ್ಲಿ ದೇವಿ ಆಶೀರ್ವದಿಸುವಂತೆ ವೈಭವೋಪೇತವಾಗಿ ಅಲಂಕರಿಸಲಾಗಿತ್ತು.
ಮೀಸಲು ಸಮರ್ಪಣೆ: ಸೀರೆ, ರವಿಕೆ, ಬಳೆ, ಅಕ್ಕಿ, ಬೇಳೆ, ಬೆಲ್ಲ, ಅರಿಷಿನ, ಕುಂಕುಮ, ಕೊಬ್ಬರಿ, ಎಲೆ, ಅಡಿಕೆ, ಹಣ್ಣು, ಕಾಯಿ ಮಡಿಲಕ್ಕಿಯನ್ನು ದೇವಿಗೆ ಮೀಸಲು ರೂಪದಲ್ಲಿ ನೀಡುವ ಪ್ರತೀತಿ ಇದೆ. ಅದರಂತೆ ಭಕ್ತರು ದೇವತೆಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದರು. ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಸಿಡುಬು ಸೇರಿ ಯಾವುದೇ ರೀತಿಯ ಕಾಯಿಲೆಗಳು ಬರಬಾರದು ಎಂಬ ನಂಬಿಕೆಯೊಂದಿಗೆ ಈ ದೇವತೆಗಳು ಸೇರಿ ಶಕ್ತಿದೇವತೆಗಳಿಗೆ ಮೀಸಲು ಅರ್ಪಿಸುವ ಪದ್ಧತಿಯನ್ನು ಭಕ್ತರು ಪರಂಪರಾನುಗತವಾಗಿ ನಡೆಸಿಕೊಂಡು ಬಂದಿರುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ.