ಏಕನಾಥೇಶ್ವರಿ ದೇವಿ ಜಾತ್ರೆಗೆ ಸಕಲ ಸಿದ್ಧತೆ

Ekanatheshwari Devi
Published on

ಚಿತ್ರದುರ್ಗ: ದುರ್ಗದ ಅಧಿದೇವತೆ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮುಂದುವರೆದಿದ್ದು, ಮಂಗಳವಾರ ತಡರಾತ್ರಿಯಿಂದ ಆರಂಭವಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ತಾಲೂಕು ಆಡಳಿತ ಮತ್ತು ಏಕನಾಥೇಶ್ವರಿ ಜೀರ್ಣೋದ್ಧಾರ ಸಮಿತಿಯಿಂದ ಉತ್ಸವ ಜರುಗಲಿದೆ.

ಯುಗಾದಿ ಹಬ್ಬವಾಗಿ 15ರಿಂದ 20 ದಿನದೊಳಗೆ ದೇವಿಯ ಜಾತ್ರೆ ನಡೆಯಬೇಕು. ಆದರೆ, ಈ ಬಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದು ವಾರ ಮುಂದೂಡಿದ್ದ ಜಾತ್ರೆಗೆ ಚಾಲನೆ ದೊರೆತಿದೆ. ಮೇ 7ರವರೆಗೆ ನಡೆಯಲಿದ್ದು, ನಿತ್ಯ ಒಂದಿಲ್ಲೊಂದು ಪೂಜಾ ಕೈಂಕರ್ಯ ಜರುಗಲಿದೆ.

ಏ. 27ರಂದು ರಾತ್ರಿ 8ಕ್ಕೆ ದೇವಿಯ ಮೂರ್ತಿಗೆ ಕಂಕಣಧಾರಣೆ, ಮದುವಣಗಿತ್ತಿ, ಭಂಡಾರದ ಪೂಜೆ ಹಾಗೂ ಮಹಾರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದೆ.

27, 28, 29ರಂದು ರಾತ್ರಿ ವೇಳೆ ದೇವಿಯ ಉತ್ಸವ ಮೂರ್ತಿಯನ್ನು ಐತಿಹಾಸಿಕ ಕೋಟೆಯ ಮೇಲುದುರ್ಗದ ದೇವಿ ದೇಗುಲದಿಂದ ಕೆಳಗಿನ ದುರ್ಗಕ್ಕೆ ಬುರುಜನಹಟ್ಟಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಸಿಂಹವಾಹಿನಿ, ಸರ್ಪೋತ್ಸವ ಹಾಗೂ ನವಿಲು ವಾಹನೋತ್ಸವದ ಮೂಲಕ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ ಕರೆತರಲಿದ್ದಾರೆ.

ಕೋಳಿ ಬುರುಜನಹಟ್ಟಿ, ಉಚ್ಚಂಗಿಯಲ್ಲಮ್ಮ ದೇವಿ ದೇಗುಲ, ಚಿಕ್ಕಪೇಟೆ, ಬುರುಜನಹಟ್ಟಿ, ಬರಗೇರಮ್ಮ ದೇವಿಯ ಪಾದದ ಗುಡಿ ಸೇರಿ ಅಕ್ಕಪಕ್ಕದ ಭಕ್ತರಿಂದ ದೇವಿಗೆ ಮೂರು ದಿನವೂ ಪೂಜೆ ನೆರವೇರಲಿದೆ.

ಮೇ 1ರಂದು ಕೋಟೆಯ ಮೇಲಿರುವ ದೇಗುಲದಲ್ಲಿ ದೇವಿಗೆ ದೊಡ್ಡಭಂಡಾರದ ಪೂಜೆ ನೆರವೇರಲಿದೆ. ನಂತರ ವಿವಿಧ ಪುಷ್ಪಗಳಿಂದ ಸಿಂಗರಿಸಿ, ಅಶ್ವ ವಾಹನದ ಮೇಲೆ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರಕ್ಕೆ ಜಾತ್ರೆಯ ಸಂಪ್ರದಾಯದಂತೆ ಕರೆತರಲಾಗುವುದು.

ಅಂದು ಚಂದ್ರಮಾಸ ಹೊಂಡದಲ್ಲಿ ದೇವಿಗೆ ಗಂಗಾಪೂಜೆ, ಕುಂಭಾಭಿಷೇಕ ಜರುಗಲಿದೆ. ರಾತ್ರಿ ಜಿಲ್ಲಾಧಿಕಾರಿ ಹಾಗೂ ಗುಡಿಗೌಡರ ಮನೆಯಲ್ಲಿ ಮಹಾಮಂಗಳಾರತಿ ಪೂಜೆ ನಡೆಯಲಿದೆ. ನಂತರ ಪಾದದಗುಡಿಗೆ ಮೂರ್ತಿಯನ್ನು ಕರೆತರಲಾಗುತ್ತದೆ. 2ರಂದು ಕರುವಿನಕಟ್ಟೆ ವೃತ್ತ, ಚಿಕ್ಕಪೇಟೆ, ಮೆದೇಹಳ್ಳಿ ಭಕ್ತರಿಂದ ಪೂಜೆ ಸ್ವೀಕಾರ ನಡೆಯಲಿದೆ.

ಮೆರವಣಿಗೆ ಅತ್ಯಂತ ವಿಶೇಷ: ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಸೇರಿ ಗಂಗಾಂಬಿಕ ಬೆಸ್ತರ ಸಮುದಾಯ ಒಳಗೊಂಡು ಭಕ್ತಸಮೂಹದಿಂದ 3ರಂದು ದೇವಿಗೆ ವಿವಿಧ ಬಗೆಯ ಪುಷ್ಪ, ವಸ್ತುಗಳಿಂದ ಅಲಂಕಾರದ ಸೇವೆ ನೆರವೇರಲಿದೆ.

ನಂತರ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ನಗರದ ರಾಜಬೀದಿಗಳಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ದೇವತೆಯ ಉತ್ಸವ ಮೂರ್ತಿಯ ಭವ್ಯ ರಥೋತ್ಸವದ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರಿಂದ ಮೀಸಲು ಅರ್ಪಣೆ ಹಾಗೂ ಹರಕೆ ಸಲ್ಲಿಕೆಯಾಗಲಿದೆ.

4ರಂದು ಏಕನಾಥೇಶ್ವರಿ ದೇವಿಯೂ ವಿವಿಧ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ಕೋಟೆಯೊಳಗಿನ ಮೂಲ ದೇಗುಲದಲ್ಲಿ ಗುಡಿದುಂಬುವ ಕಾರ್ಯಕ್ರಮದೊಂದಿಗೆ ದೇವಿಯನ್ನು ಸ್ವಸ್ಥಾನಕ್ಕೆ ಕರೆತರಲಾಗುವುದು. 7ರವರೆಗೂ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಲಿದ್ದು, ಅಂದು ದೇವಿಯ ಜಾತ್ರೆ ಮುಕ್ತಾಯವಾಗಲಿದೆ ಎಂದು ಸಮಿತಿ ತಿಳಿಸಿದೆ.

ಸಿಡಿಗಾಗಿ ಮನವಿ: ಕೋವಿಡ್ ಕಾರಣಕ್ಕೆ 2020, 2021 ಸೇರಿ ಎರಡು ವರ್ಷ ಸಿಡಿ ಮಹೋತ್ಸವ ನಡೆದಿರಲಿಲ್ಲ. 2022, 2023ರಲ್ಲಿ ದೇವಿಯ ಜಾತ್ರೆ ನಡೆಯಿತಾದರೂ ಸಿಡಿಗೆ ಅವಕಾಶ ನೀಡಿರಲಿಲ್ಲ. ಭಕ್ತರು ಹರಕೆ ತೀರಿಸಲು ಈ ಬಾರಿಯಾದರೂ ಮೇ 4ರಂದು ಪಾದದ ಗುಡಿ ಮುಂಭಾಗ ಎಂದಿನಂತೆ ಸಿಡಿ ಆಚರಿಸಲು ಅನುಮತಿ ನೀಡಬೇಕು ಎಂದು ಜೀರ್ಣೋದ್ಧಾರ ಸಮಿತಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದೆ. ಡಿಸಿ ಅವರ ಗಮನಕ್ಕೆ ತರುವುದಾಗಿ ತಿಳಿಸಿದೆ. ಈ ಸಂಬಂಧ ಯಾವುದೇ ತೀರ್ಮಾನವಾಗಿಲ್ಲ.

ನವದುರ್ಗೆಯರ ದೊಡ್ಡಕ್ಕ: ಕೋಟೆನಾಡಿನ ರಕ್ಷಕ ದೇವತೆಗಳೆಂದೇ ಪ್ರತೀತಿ ಇರುವ ನವದುರ್ಗೆಯರಲ್ಲಿ ಏಕನಾಥೇಶ್ವರಿ ಹಿರಿಯ ಸ್ಥಾನದಲ್ಲಿದ್ದು, ಉಳಿದ ದೇವತೆಗಳಿಗೆ ದೊಡ್ಡಕ್ಕಳಾಗಿದ್ದಾಳೆ ಎಂಬುದು ಭಕ್ತರ ನಂಬಿಕೆ. ಏಕನಾಥೇಶ್ವರಿ ದೇವಿಯನ್ನು ಅನೇಕ ಭಕ್ತರು ಏಕನಾಥಮ್ಮ, ದೊಡ್ಡ ಭಂಡಾರದೊಡತಿ ಮುಂತಾದ ಹೆಸರುಗಳಿಂದಲೂ ಕರೆಯುವ ಪ್ರತೀತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net