ಏಕನಾಥಮ್ಮನ ಪುರ ಪ್ರವೇಶಕ್ಕೆ ಭವ್ಯ ಸ್ವಾಗತ

Ekanatheshwaridevi
Published on

ಚಿತ್ರದುರ್ಗ: ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ಮುಖಪದ್ಮ ಲೋಕಾರ್ಪಣೆ ಅಂಗವಾಗಿ ಬುಧವಾರ ದೇವಿಯ ಉತ್ಸವ ಮೂರ್ತಿಯ ವೈಭವೋಪೇತ ಮೆರವಣಿಗೆ ರಾಜಬೀದಿಗಳಲ್ಲಿ ಸಂಚರಿಸಿತು.

ಫಿಲ್ಟರ್ ಹೌಸ್ ರಸ್ತೆಯ ದೇವಿಯ ಪಾದದ ಗುಡಿ ಮುಂಭಾಗ ದೇವಿಯ ಉತ್ಸವ ಮೂರ್ತಿಯನ್ನು ಪುಷ್ಪಗಳು ಸೇರಿ ವಿವಿಧ ಆಕರ್ಷಕ ವಸ್ತುಗಳಿಂದ ಸರ್ಪಾಲಂಕಾರದಲ್ಲಿ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಅರ್ಚಕರು ಮಹಾಮಂಗಳಾರತಿ ಬೆಳಗಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಿತು.

ಪುರ ಪ್ರವೇಶಿಸಿದ ದೇವಿಗೆ ಮಾರ್ಗದುದ್ದಕ್ಕೂ ಭಕ್ತರು ನೀರೆರೆಯುವ, ಪುಷ್ಪ ಮಳೆ ಸುರಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಅನೇಕರು ಉಧೋ ಉಧೋ ಎಂಬ ಜಯಘೋಷ ಮೊಳಗಿಸಿದರು. ಈ ಕ್ಷಣವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು.

ಕೋಟೆ ರಸ್ತೆ, ಚಿಕ್ಕಪೇಟೆ, ಆನೆಬಾಗಿಲು, ಕೋಟೆ ಆಂಜನೇಯ ಸ್ವಾಮಿ ದೇಗುಲ, ಬುರುಜನಹಟ್ಟಿ, ಸಿಹಿನೀರು ಹೊಂಡದ ಬಾಗಿಲು, ಹೊಳಲ್ಕೆರೆ ರಸ್ತೆ, ಸಂಗೊಳ್ಳಿರಾಯಣ್ಣ, ಗಾಂಧಿ, ಎಸ್‌ಬಿಐ ವೃತ್ತ, ಧರ್ಮಶಾಲಾ ರಸ್ತೆ, ವಾಸವಿ ವಿದ್ಯಾಸಂಸ್ಥೆ, ದೊಡ್ಡಪೇಟೆ, ಉಜ್ಜಯಿನಿ ಮಠ, ಜೋಗಿಮಟ್ಟಿ ರಸ್ತೆ, ಜಟ್‌ಪಟ್ ನಗರ, ಕೂಡಲಿ ಶೃಂಗೇರಿ ಮಠ, ಕರುವಿನ ಕಟ್ಟೆ ವೃತ್ತ ಮಾರ್ಗಗಳಲ್ಲಿ ಸಾಗಿತು.

ಮೆರವಣಿಗೆಗೆ ಕಹಳೆ, ಉರುಮೆ, ಡೊಳ್ಳು, ನಾದಸ್ವರ, ತಮಟೆ ಸೇರಿ ಇತರೆ ಜನಪದ ಕಲಾತಂಡಗಳ ಮಂಗಳವಾದ್ಯಗಳು ಮೆರುಗು ನೀಡಿದವು.

ಕೋಟೆ ಆವರಣದಲ್ಲಿ ಮಂಗಳವಾರ ನಡೆದ ಉಯ್ಯಲೋತ್ಸವಕ್ಕೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದ್ದರು. ಬಿಜೆಪಿ ಯುವ ಮುಖಂಡ ರಘುಚಂದನ್, ಏಕನಾಥೇಶ್ವರಿ ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ ಸೇರಿ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net