

ಚಿಕ್ಕೋಡಿ, ಬೆಳಗಾವಿ: ಪಟ್ಟಣದಲ್ಲಿ ಶುಕ್ರವಾರ 11ನೇ ದಿನದ ಸಾರ್ವಜನಿಕ ಗಣೇಶನನ್ನು ಏಕಕಾಲಕ್ಕೆ ಯಾವುದೇ ತೊಂದರೆಯಾಗದಂತೆ ವಿಜೃಂಭಣೆಯಿಂದ ವಿಸರ್ಜಿಸಲಾಯಿತು.
25ಕ್ಕೂ ಹೆಚ್ಚಿನ ಗಣೇಶ ಮಂಡಳಗಳು ತಮ್ಮ ಗಣೇಶ ಮೂರ್ತಿಯನ್ನು ಬಸ್ ನಿಲ್ದಾಣದ ಹತ್ತಿರ ತಂದು ನಿಲ್ಲಿಸಿದರು. ಸಂಜೆ ನಾಲ್ಕು ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಪೊಲೀಸ್ ಇಲಾಖೆ, ಪುರಸಭೆ ಸರ್ವ ಸದಸ್ಯರು ಮತ್ತು ನಗರದ ಹಿರಿಯ ನಾಗರಿಕರು ಗಣೇಶ ವಿಸರ್ಜನೆ ಮೆರವಣಿಗೆಗೆ ಸಾಕ್ಷಿಯಾದರು. ಬಸ್ ನಿಲ್ದಾಣದಿಂದ ಪುರಸಭೆ ಕಚೇರಿವರೆಗೆ ಆಗಮಿಸಿದ ಗಣೇಶ ಮೂರ್ತಿಗಳನ್ನು ಪುರಸಭೆ ಮುಂಭಾಗದಲ್ಲಿ ಪೂಜೆ ಸಲ್ಲಿಸಲಾಯಿತು.
ಪ್ರತಿ ವರ್ಷದಂತೆ ಈ ಬಾರಿ ಎಲ್ಲ ಗಣೇಶ ಮಂಡಳಗಳು ಬೇರೆ ಬೇರೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡದೆ, ಎಲ್ಲ ಗಣೇಶ ಮಂಡಳಗಳ ಒಪ್ಪಿಗೆ ಮೇರೆಗೆ ಒಂದೇ ಸೌಂಡ್ ಹಚ್ಚಿ ವಿಸರ್ಜನೆ ಮೆರವಣಿಗೆ ಶಾಂತಿಯುತವಾಗಿ ಜರುಗಿತು.
ಸಂಜೆ 4ಕ್ಕೆ ಬಸ್ ನಿಲ್ದಾಣದ ಹತ್ತಿರ ಆಗಮಿಸಿದ ಮಹಿಳೆಯರು ತಲೆ ಮೇಲೆ ಪೇಟಾ ಧರಿಸಿ ಸಂಗೀತಕ್ಕೆ ಕುಪ್ಪಳಿಸುತ್ತ, ಗಣೇಶಗೆ ಜೈಕಾರ ಹಾಕಿದರು. ಚಿಕ್ಕೋಡಿ ಜಗದ್ಗುರು ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಗಣೇಶ ವಿಸರ್ಜನೆ ಶೋಭಾಯಾತ್ರೆಗೆ ಚಾಲನೆ ನೀಡಿದರು. ಕರ್ನಾಟಕ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಸದಸ್ಯರಾದ ನಾಗರಾಜ ಮೇದಾರ, ವಿಶ್ವನಾಥ ಕಾಮಗೌಡ, ಮುಖಂಡರಾದ ಶಿವು ಮಿರ್ಜೆ, ಬಾಬು ಮಿರ್ಜೆ, ಅಂದಾನಿ ವಂಟಮುತ್ತೆ, ಸತೀಶ ನೂಲಿ ಇತರರಿದ್ದರು.