

ಬೀದರ್: ದೇವರ ಪಲ್ಲಕ್ಕಿ ಉತ್ಸವ, ಜಾತ್ರೆಗಳು ಭಾರತದ ವಿವಿಧತೆಯಲ್ಲಿ ಏಕತೆ ಮಂತ್ರಕ್ಕೆ ಗಟ್ಟಿ ಬುನಾದಿಗಳಾಗಿವೆ ಎಂದು ಬೇಮಳಖೇಡ್ - ಗೋರ್ಟಾ ಹಿರೇಮಠದ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಹೇಳಿದರು.
ಭಾಲ್ಕಿ ತಾಲೂಕಿನ ಹಾಲಹಳ್ಳಿ(ಕೆ) ಗ್ರಾಮದ ಶ್ರೀ ಕೊಳ್ಳದ ಸಂಗಮೇಶ್ವರರ ಎರಡನೇ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಶ್ರೀ ಸಂಗಮೇಶ್ವರ ದೇವರ ಭವ್ಯ ಪಲ್ಲಕ್ಕಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಭಾರತದ ಆತ್ಮವೆನಿಸಿದ ಗ್ರಾಮೀಣ ಭಾಗಗಳಲ್ಲಿ ಜಾತ್ರೆ, ನಾನಾ ಉತ್ಸವಗಳು ಸರ್ವ ಸಮುದಾಯಗಳು ಒಂದೆಡೆ ಸೇರಲು ಮತ್ತು ಪರಸ್ಪರ ತಾರತಮ್ಯ ಮರೆತು ಒಂದಾಗಿ ಬೆಳೆಯಲು ಪ್ರಶಸ್ತ್ಯ ಸ್ಥಾನಗಳಾಗಿವೆ ಎಂದರು.
ಗ್ರಾಮಗಳ ಅಭ್ಯುದಯ ಮತ್ತು ಆರ್ಥಿಕ ಚೇತರಿಕೆಗೆ ಜಾತ್ರೆಗಳು ಪೂರಕ ವಾತಾವರಣ ನಿರ್ಮಿಸುತ್ತವೆ. ಹೀಗಾಗಿ ಪ್ರತಿ ಗ್ರಾಮಗಳಲ್ಲಿ ಜಾತ್ರೆ, ಉತ್ಸವಗಳು ನಿರಂತರ ಏರ್ಪಡಿಸಬೇಕು. ಇದರಿಂದ ಅಧ್ಯಾತ್ಮಿಕ ಚಿಂತನೆ ಪಸರಿಸಲು ಸಹ ಸಾಧ್ಯ ಎಂದರು.
ಕರೊನಾ ನಿಯಮದಂತೆ ಸಾಂಕೇತಿಕವಾಗಿ ಜಾತ್ರೆ ಸರಳವಾಗಿ ಆಚರಿಸಲಾಯಿತು. ಸಂಜೆ ದೇವಸ್ಥಾನ ಸಮಿತಿ ಸದಸ್ಯರಿಂದ ರಥೋತ್ಸವ ನಡೆಯಿತು. ಜಾತ್ರೆ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.