ಏಕತಾನತೆ ಸಂಸ್ಕೃತಿಗಳಿಂದ ಉತ್ತಮ ಕಥೆಗಳ ನಿರೀಕ್ಷೆ ಅಸಾಧ್ಯ

mysore
Published on

ಮೈಸೂರು: ಏಕತಾನತೆಯ ಬದುಕು ಹಾಗೂ ಸಂಸ್ಕೃತಿಗಳಿಂದ ಉತ್ತಮ ಕಥೆಗಳು ಹೊರಬರಲಾರವು ಎಂದು ಕಥೆಗಾರ, ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕ ಅಬ್ದುಲ್ ರಶೀದ್ ಹೇಳಿದರು.

ವಿ ಕೇರ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪುಸ್ತಕ ಓದು 9ನೇ ಸರಣಿ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮನುಷ್ಯ ತನ್ನ ಕೋಶದಿಂದ ಹೊರಬಿದ್ದು ಹೊರ ಜಗತ್ತನ್ನು ಪ್ರೀತಿಯ ಕಣ್ಣಿನಿಂದ ನೋಡುತ್ತ, ಪರಿಸರದೊಳಗೆ ಒಳಗೊಳ್ಳುತ್ತ ಜೀವಿಸಿದಾಗ ಸಿಗುವ ಅನುಭವಗಳೇ ನಿಜವಾದ ಕಥಾ ಸಾರಗಳು.

ಇದನ್ನು ನಾವು ಮಕ್ಕಳಾಗಿದ್ದಾಗಲೇ ರೂಢಿಸಿಕೊಂಡರೆ ಮುಂದೆ ಒಳ್ಳೆಯ ಕಥೆಗಾರರಾಗಬಹುದಾಗಿದೆ ಎಂದು ತಿಳಿಸಿದರು.

ಪ್ರಕೃತಿ ಮತ್ತು ಸಹ ಜೀವಿಗಳೊಡನೆ ಅನನ್ಯ ಸ್ನೇಹ ಸಂಬಂಧ ಕಥೆಗಾರರಿಗೆ ಅವಶ್ಯ. ಅದರೊಡನೆ ಇತರರ ಅನುಭವ, ಆಚಾರ ವಿಚಾರ, ಗೌರವದೊಡನೆ ಮನನ ಮಾಡಿಕೊಳ್ಳುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಪುಸ್ತಕ ಓದು ನಮ್ಮನ್ನು ನಾವು ಕಾಣದಿರುವ, ಕಾಣಲಾಗದ ಸುಂದರ ಲೋಕವೊಂದಕ್ಕೆ ಕೊಂಡೊಯ್ದು ಬಿಡುತ್ತದೆ. ದಿನಪತ್ರಿಕೆಗಳು ಹಾಗೂ ಪುಸ್ತಕಗಳ ನಿತ್ಯದ ಓದುವಿಕೆ ನಮ್ಮನ್ನು ಎಚ್ಚರಿಸುವ ಹಾಗೂ ಎತ್ತರಿಸುವ ಚಟುವಟಿಕೆಗಳು ಎಂದರು.

ವಿ ಕೇರ್ ಸಂಸ್ಥೆ ಸಂಸ್ಥಾಪಕಿ ಡಾ.ಕುಮುದಿನಿ ಮಾತನಾಡಿ, ತಂತ್ರಜ್ಞಾನ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮುಳುಗಿ ಹೋಗುತ್ತಿರುವ ಸಮಾಜದಲ್ಲಿ ಕಿರಿಯ ತಲೆಮಾರನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ಸೂಕ್ಷ್ಮಜ್ಞರ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಪ್ರತಿಯೊಂದಕ್ಕೂ ಮೊಬೈಲ್ ತಂತ್ರಜ್ಞಾನದ ಮೊರೆ ಹೋಗಿರುವ ಮಕ್ಕಳಿಗೆ ನಿಜವಾದ ಜ್ಞಾನದ ಹಾಗೂ ಮಾನವೀಯ ಮೌಲ್ಯ ಕೊರತೆ ಕಾಡದಂತೆ ನೋಡಿಕೊಳ್ಳಬೇಕಿದೆ.

ಜತೆಗೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿರುವ ಹಿರಿಯರ ಅನುಭವ ಹಾಗೂ ಅನುಸರಿಸಲು ಯೋಗ್ಯರಾದ ವ್ಯಕ್ತಿಗಳನ್ನು ಪರಿಚಯಿಸುವ ತುರ್ತು ಮತ್ತು ಅಗತ್ಯವಿದೆ. ಗ್ರಂಥಾಲಯಗಳಲ್ಲಿ ಕಾಯುತ್ತಿರುವ ಪುಸ್ತಕಗಳು ಮತ್ತು ಅವುಗಳ ಸಖ್ಯ ಇಂದಿನ ಮಕ್ಕಳನ್ನು ಹೆಚ್ಚೆಚ್ಚು ಮಾನವೀಯರನ್ನಾಗಿಸಬಹುದು. ಹೀಗಾಗಿ ಇದನ್ನು ವಿ ಕೇರ್ ಸಂಸ್ಥೆ ಶಾಲಾ ಸಮಾಜ ಕಾರ್ಯದೊಡನೆ ಮೇಳೈಸಿ ಮಾಡುತ್ತಿದೆ. ಶಾಲಾ ಶಿಕ್ಷಕರು, ಮಕ್ಕಳ ಪಾಲಕರು ಮತ್ತು ಶಿಕ್ಷಣಾಧಿಕಾರಿಗಳ ಜವಾಬ್ದಾರಿಯುತ ನಡೆ ಈ ಶ್ರೇಯಸ್ಸಿಗೆ ಕಾರಣವಾಗಿದೆ ಎಂದರು.

ಪುಸ್ತಕ ಓದು ಹಾಗೂ ಚರ್ಚೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕಥೆಗಳ ಓದಿನೊಡನೆ ನಡೆಯಿತು. ವೈದ್ಯರಾದ ಡಾ.ರಮ್ಯಾ ಪ್ರದೀಪ್, ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಾಂಡ್ರಾ ಅವರು ಕಥೆಗಳನ್ನು ಮನೋಜ್ಞವಾಗಿ ಓದಿದರು.

ಮಕ್ಕಳು ವಚನಗಳು, ಕುವೆಂಪು ಅವರ ಗೀತೆಗಳನ್ನು ಹಾಡಿದರು. ಕಥೆಗಳನ್ನು ಆಲಿಸುತ್ತಿದ್ದ ಮಕ್ಕಳು ತಮಗೆ ಹೊಸತು ಎನಿಸಿದ ಪದ ಬರೆದಿಟ್ಟುಕೊಂಡು, ಪ್ರಶ್ನೆಗಳ ಮೂಲಕ ಕಥಾ ಸಾರ ಮತ್ತು ಕಥೆಗಾರನ ಆಶಯ ಚರ್ಚಿಸಿ ತಿಳಿದುಕೊಂಡಿದ್ದು ವಿಶೇಷವಾಗಿತ್ತು.

ಹೂಟಗಳ್ಳಿ, ಬೆಳವಾಡಿ, ಕೆಎಚ್‌ಬಿ ಕಾಲನಿ ಸುತ್ತಲಿನ ಶಾಲಾ ಮಕ್ಕಳು, ಒಡನಾಡಿಯ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net