ಏಕಕಾಲಕ್ಕೆ ಅಕ್ಕಪಕ್ಕದ ಎರಡು ಮನೆಗಳಲ್ಲಿ ಕಳವು

udp-theft
Published on

ಚನ್ನರಾಯಪಟ್ಟಣ : ತೋಟದ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಏಕಕಾಲಕ್ಕೆ ಅಕ್ಕಪಕ್ಕದ ಎರಡು ಮನೆಗಳಲ್ಲಿ 1.48 ಲಕ್ಷ ರೂ. ಮೌಲ್ಯದ 39 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ್ದಾರೆ.
ತಾಲ್ಲೂಕಿನ ಸಾತನಹಳ್ಳಿ ಗ್ರಾಮದ ಕರಿಗೌಡ ಹಾಗು ಮೋಹನ್‌ಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಡಿ. 31 ರಂದು ಹನುಮ ಜಯಂತಿ ಅಂಗವಾಗಿ ಎರಡೂ ಮನೆಯವರು ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರು. ಬಲವಾದ ಆಯುಧದಿಂದ ಮನೆಯ ಬಾಗಿಲು ಮುರಿದು ನಂತರ ಬೀರುವನ್ನು ಒಡೆದು ತಮ್ಮ ಕೃತ್ಯ ಸಾಧಿಸಿದ್ದಾರೆ. ಕರಿಗೌಡ ಅವರ ಮನೆಯಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಓಲೆ-ಜುಮುಕಿ, 9 ಗ್ರಾಂ ಚಿನ್ನದ ಎರಡು ಉಂಗುರ, 11 ಗ್ರಾಂ ತೂಕದ ಚೈನು ಹಾಗು ಪಕ್ಕದ ಮೋಹನ್‌ಕುಮಾರ್ ಅವರ ಮನೆಯಲ್ಲಿನ 6 ಗ್ರಾಂ ತೂಕದ ಚಿನ್ನದ ಓಲೆ, 3 ಗ್ರಾಂ ತೂಕದ ಚಿನ್ನದ ಎರಡು ಮಕ್ಕಳ ಉಂಗುರ ಕಳವು ಮಾಡಲಾಗಿದೆ. ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net