

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಏ. 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಫಲಾನುಭವಿಗಳಿಗೆ ಹಸ್ತಾಂತರಗೊಳ್ಳಲಿರುವ ಹುಬ್ಬಳ್ಳಿ ಮಂಟೂರ ರಸ್ತೆಯ ಆಶ್ರಯ ಮನೆಗಳ ನಿರ್ವಣದ ಅಂತಿಮ ಹಂತದ ಕಾಮಗಾರಿಯನ್ನು ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಶುಕ್ರವಾರ ಪರಿಶೀಲಿಸಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಅಗತ್ಯ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ವಣವಾಗುತ್ತಿರುವ 1.80ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ನಾಗೇಶ್ವರ ನಾಗೇನಹಳ್ಳಿಯಲ್ಲಿ ಕಳೆದ ವರ್ಷ 36,789 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ. ಇದರ ಮುಂದುವರಿದ ಭಾಗವಾಗಿ ರಾಜ್ಯಾದ್ಯಂತ ಎರಡನೇ ಹಂತದಲ್ಲಿ 42,345 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಏ. 27ರಂದು ಹಸ್ತಾಂತರ ಮಾಡಲಿದ್ದಾರೆ. ಈ ಕಾರ್ಯಕ್ರಮದ ಸಿದ್ಧತೆಯನ್ನು ಇಂದು ಪರಿಶೀಲಿಸಿದ್ದೇನೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆಗಳನ್ನು ಕೊಡಲಿಲ್ಲ. ಘೂಷಣೆ ಮಾಡಿದ ಯೋಜನೆಗಳನ್ನು ಪೂರ್ಣಗೊಳಿಸಲು ಸಮರ್ಪಕ ಅನುದಾನ ಕೂಡ ನೀಡದೇ ಬಡವರ ಸೂರಿನ ಕನಸಿಗೆ ಅಡ್ಡಿಯೊಡ್ಡಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ತಕ್ಷಣೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಅನುದಾನ ಬಿಡುಗಡೆಯೊಂದಿಗೆ ಹಂತ ಹಂತವಾಗಿ ಮನೆಗಳ ಹಂಚಿಕೆಯನ್ನು ಮಾಡಲಾಗುತ್ತಿದೆ. ಇದು ಬಡವರ ಪರ ಕಾಳಜಿ ಇರುವ ಸರ್ಕಾರವಾಗಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ, ಇತರರು ಇದ್ದರು.