

ಹಾಸನ: ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆಗಳನ್ನ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ಏ. 24ರ ಸಂಜೆ 6 ರಿಂದ ಏ. 27ರ ರಾತ್ರಿ 12ರ ವರೆಗೆ ಜಿಲ್ಲಾದ್ಯಂತ 144 ಸೆಕ್ಷೆನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು
ಜಿಲ್ಲಾ ಪಂಚಾಯಿತಿ ಹೇಮಾವತಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಲೋಕಸಭಾ ಚುನಾವಣೆಗೆ ಕಡೂರು ಸೇರಿದಂತೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 2,221 ಮತಗಟ್ಟೆಗಳನ್ನ ಸ್ಥಾಪಿಸಲಾಗಿದ್ದು, ಇದರಲ್ಲಿ ಒಟ್ಟು 17,36,610 ಮತದಾರರಿದ್ದಾರೆ, ಪುರುಷರು 863727 ಮತ್ತು ಮಹಿಳೆಯರು 8,72,840 ಇತರೆ 43 ಮತದಾರರನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ಪ್ರಥಮ ಬಾರಿಗೆ ಮತ ಚಲಾಯಿಸುವವರ ಸಂಖ್ಯೆ 33,051 ಇದ್ದು, 17,744 ಯುವಕರು ಹಾಗು 15,306 ಯುವತಿಯರಿದ್ದಾರೆ. 85 ವರ್ಷ ಮೇಲ್ಪಟ್ಟ 2636, ದಿವ್ಯಾಂಗ ಮತದಾರರು 1373 ಜನರಿದ್ದು, 3871 ಜನರು ಹಕ್ಕು ಚಲಾಯಿಸಿದ್ದಾರೆ. ಮತದಾನಕ್ಕೆ ನೋಂದಣಿ ಮಾಡಿಕೊಂಡು ಮತದಾನ ಮಾಡಲು ಸಾಧ್ಯವಾಗದೆ ಇದ್ದವರು ಏ. 26ರಂದು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಬಹುದು. ಜಿಲ್ಲಾದ್ಯಂತ 1589 ಅಧಿಕಾರಿ ಅಥವಾ ಸಿಬ್ಬಂದಿ ಪೈಕಿ 1038 ಜನರು ಮತದಾನ ಮಾಡಿದ್ದಾರೆ ಎಂದು ಹೇಳಿದರು.
ಮತದಾನಕ್ಕೆ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರಕ್ಕೆ ಅಂತ್ಯ ಬೀಳಲಿದ್ದು, ಬುಧವಾರ ಸಂಜೆ 6 ಗಂಟೆಯಿಂದ ಕೊನೆಯ 48 ಗಂಟೆಗಳಲ್ಲಿ ಮಾದರಿ ನೀತಿ ಸಮಿತಿ ಜಾರಿಯಾಗಿರುವುದರಿಂದ ಜಿಲ್ಲೆಯಲ್ಲಿ ಹೊರ ಜಿಲ್ಲೆಯಿಂದ ಬಂದಿರುವಂತಹ ರಾಜಕೀಯ ಪಕ್ಷದ ಮುಖಂಡರು ಮತ್ತು ಸ್ಟಾರ್ ಪ್ರಚಾರಕರು ಕ್ಷೇತ್ರ ಬಿಟ್ಟು ಹೋಗಬೇಕು ಮತ್ತು ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಮನೆ ಮನೆಗೆ ಹೋಗಿ ಪ್ರಚಾರ ಮಾಡುವಾಗ ಗುಂಪಿನಲ್ಲಿ ಐದಕ್ಕಿಂತ ಹೆಚ್ಚು ಜನ ಮೀರದಂತೆ ಪ್ರಚಾರ ಮಾಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿಗೆ ಮತದಾನವಾಗುವಂತೆ ಈಗಾಗಲೇ ಸ್ವೀಪ್ ಸಮಿತಿಯಿಂದ ಪ್ರಚಾರ ಮತ್ತು ಜಾಗೃತಿಯನ್ನು ಮಾಡಲಾಗಿದೆ ಅಲ್ಲದೆ ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆಯನ್ನ ಘೋಷಿಸಲಾಗಿದೆ ಎಂದರು.
ಮತದಾನದ ದಿನಕ್ಕೆ ಅಗತ್ಯ ವಸ್ತುಗಳ ಚುನಾವಣೆ ಸಾಮಗ್ರಿಗಳನ್ನ ಪೂರೈಕೆ ಮಾಡಲು ಏ. 25ರಂದು ಸಿಬ್ಬಂದಿಗಳಿಗೆ ಆಯಾ ಮತಗಟ್ಟೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾಗುವುದು ಬೇರೆ ಬೇರೆ ತಾಲೂಕಿನಿಂದ ಚುನಾವಣೆಗೆ ನಿಯೋಜನೆಗೊಂಡಿರುವಂತಹ ಸಿಬ್ಬಂದಿಗಳನ್ನು ಕರೆತರಲು 136 ಬಸ್ಸುಗಳನ್ನು ಬಳಸಲಾಗಿದೆ ಅಲ್ಲದೆ ಚುನಾವಣೆಗೆ 278 ಸರ್ಕಾರಿ ಬಸ್ಸುಗಳು ಹಾಗೂ 104 ಜೀಪ್ 91 ಮ್ಯಾಕ್ಸಿ ಕ್ಯಾಬ್ ಹಾಗೂ ಇನ್ನಿತರ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರಿ ಸೇವೆಯಲ್ಲಿದ್ದು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ ನಾಲ್ವರು ಸರ್ಕಾರಿ ನೌಕರರನ್ನು ಕರ್ತವ್ಯ ಲೋಪ ಹಿನ್ನಲೆ ಅಮಾನತು ಮಾಡಲಾಗಿದೆ. ಮೂಲಭೂತ ಸೌಕರ್ಯಕ್ಕಾಗಿ ಕೆಲವು ಭಾಗಗಳಲ್ಲಿ ಮತದಾನ ಬಹಿಷ್ಕಾರದ ಕೂಗು ಕೇಳಿಬಂದಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದು ಎಲ್ಲರೂ ಮತದಾನದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಇನ್ನು ಕಾಡಾನೆ ಹಾವಳಿ ಪೀಡಿತ ಪ್ರದೇಶದ ಜನರು ಮತದಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಆ ಕಾರಣಕ್ಕಾಗಿಯೇ ಎರಡು ಆನೆಗಳನ್ನು ಸೆರೆ ಹಿಡಿಯಲಾಗಿದೆ. ಮತದಾನದ ದಿನ ಆನೆಯಿಂದ ತೊಂದರೆ ಆದರೆ ತಕ್ಷಣವೇ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಈಗಾಗಲೇ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಯಾವುದೇ ರೀತಿ ಅಕ್ರಮವಾಗಿ ಮತದಾರರಿಗೆ ಆಮಿಷ ಮತ್ತು ಇನ್ನಿತರೆ ಚಟುವಟಿಕೆಗಳು ಕಂಡು ಬಂದರೆ ಅವರು ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಈಗಾಗಲೇ ಜಿಲ್ಲೆಯಲ್ಲಿ 31 ಚೆಕ್ ಪೋಸ್ಟ್‌ಗಳನ್ನು ನಿಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಇದ್ದರು.
55 ರೌಡಿಶೀಟರ್‌ಗಳ ಗಡಿಪಾರು:
ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗೆ ಈಗಾಗಲೇ ಪೊಲೀಸ್ ಇಲಾಖೆ ಶಾಂತಿಯುತ ಮತದಾನಕ್ಕಾಗಿ ಜಿಲ್ಲಾದ್ಯಂತ 1200 ರೌಡಿ ಶೀಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 55 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಹೇಳಿದರು.
4 ಅರೆ ಸೇನಾ ತುಕಡಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಸೆಪ್ಟೆಂಬರ್‌ನಿಂದ ಇಲ್ಲಿವರೆಗೆ 5 ಜನರ ವಿರುದ್ಧ ಗುಂಡಾ ಕಾಯ್ದೆ ಹಾಕಲಾಗಿದೆ. ಗಡಿಪಾರು ಆದವರಿಗೂ ಮತದಾನಕ್ಕೆ ಅವಕಾಶವಿದ್ದು, ಮತಗಟ್ಟೆ ಅಧಿಕಾರಿಗಳು ಅವರ ಸಂಪರ್ಕದಲ್ಲಿರುತ್ತಾರೆ. ಹಕ್ಕು ಚಲಾಯಿಸಲು ಅವರಿಗೆ ಯಾವ ತೊಂದರೆಯಿಲ್ಲ ಎಂದರು.
ಪಾನ ವಿರೋಧಿ ದಿನ:
ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಸುಗಮವಾಗಿ ನಡೆಯುವ ದೃಷ್ಟಿಯಿಂದ ಏಪ್ರಿಲ್ 24ರ ಸಂಜೆ 6 ಗಂಟೆಯಿಂದ ಏಪ್ರಿಲ್ 26 ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯಾದ್ಯಂತ ಪಾನ ವಿರೋಧಿ ದಿನ ಎಂದು ಘೋಷಣೆ ಮಾಡಲಾಗಿದೆ. ಈ ದಿನ ಅಮಲು ಪಾನೀಯ ಮದ್ಯ ಶೇಖರಣೆ ಮದ್ಯ ಮಾರಾಟ ಸರಬರಾಜು ಮಾಡುವಂತಹ ಎಲ್ಲ ಬಗೆಯ ಸ್ಟಾರ್ ಹೋಟೆಲ್ ಬಾರ್ ರೆಸ್ಟೋರೆಂಟ್ ಮದ್ಯ ಮಾರಾಟ ಹಾಗೂ ಇನ್ನಿತರೆ ಸಾಗಾಟ ಹಾಗೂ ಸರಬರಾಜುಗಳನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತದಾನ ದಿನವಾದ ಏ. 26 ರಂದು ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದರು
ಹೊಳೆನರಸೀಪುರದಲ್ಲಿ ಹದ್ದಿನ ಕಣ್ಣು:
ಲೋಕಸಭಾ ಚುನಾವಣೆಗೆ ಹೊಳೆನರಸೀಪುರ ಕ್ಷೇತ್ರದಿಂದಲೇ ಇಬ್ಬರು ಪ್ರಬಲ ಅಭ್ಯರ್ಥಿಗಳಾಗಿರುವುದರಿಂದ ಆ ವಿಧಾನಸಭೆ ಕ್ಷೇತ್ರದ ಎಲ್ಲಾ 325 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚುನಾವಣಾ ಆಯೋಗವೇ ಎಲ್ಲಾ ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಅಧಿಕಾರಿಗಳು ದೆಹಲಿಯಲ್ಲಿ ಕುಳಿತು ಇಲ್ಲಿನ ಪ್ರಕ್ರಿಯೆ ತಿಳಿಯುತ್ತಾರೆ. ಹಾಸನ ಲೋಕಸಭೆ ಕ್ಷೇತ್ರದಾದ್ಯಂತ 2221 ಮತಗಟ್ಟೆ ತೆರೆದಿದ್ದು, 1 ಸಾವಿರ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. 346 ಮೈಕ್ರೋ ಆಬ್ಸರ್‌ರ್ವರ್‌ಗಳು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಾಖಲಾದ ಪ್ರಕರಣಗಳು:
ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 16 ರಿಂದ ಇಲ್ಲಿವರೆಗೆ 1,34,64,492 ರೂ. ವಶಪಡಿಸಿಕೊಳ್ಳಲಾಗಿದೆ. 5,69,153 ಲೀಟರ್‌ನ 9,78,28,653 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. 6,500 ರೂ. ಬೆಲೆಯ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 12 ಬಂಡಲ್ ಸೀರೆ, 6 ಬಂಡಲ್ ಷರ್ಟ್ಸ್, 93 ಡ್ರೇಸ್ ಪೀಸ್ ಸುಪರ್ದಿಗೆ ಪಡೆಯಲಾಗಿದೆ. ಇದುವರೆಗೆ ಪೊಲೀಸ್ ಇಲಾಖೆಯಿಂದ 73, ಎಫ್‌ಎಸ್‌ಟಿ 12 ಮತ್ತು ಅಬಕಾರಿ ಇಲಾಖೆಯಿಂದ 1558 ದೂರು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.