

ಗೋಣಿಕೊಪ್ಪ: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಏ.25 ರಿಂದ 3 ದಿನಗಳು ಒಕ್ಕಲಿಗರ ಕ್ರೀಡಾ ಕಲರವ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ವಿ.ಪಿ.ಡಾಲು ತಿಳಿಸಿದರು.
ಗೋಣಿಕೊಪ್ಪ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಕಾರ್ಯಕ್ರಮದ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿ, ಏ. 25, 26, ಮತ್ತು 27 ರಂದು ಕ್ರೀಡಾ ಕಲರವ ನಡೆಯಲಿದ್ದು, ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಒಕ್ಕಲಿಗ ಜನಾಂಗದವರು ಪಾಲ್ಗೊಳ್ಳಬಹುದು. ಮಹಿಳೆಯರಿಗೆ ಕ್ರೀಡೆಯಲ್ಲಿ ಮತ್ತಷ್ಟು ಅವಕಾಶ ನೀಡಲು ತವರು ಮನೆಯ ಗ್ರಾಮದ ಹೆಸರಿನಲ್ಲಿ ಆಡಲು ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಪುರುಷರಿಗೆ ಕ್ರಿಕೆಟ್, 7 ಜನರ ತಂಡದ ಹಗ್ಗ-ಜಗ್ಗಾಟ, 45 ವರ್ಷ ಮೇಲ್ಪಟ್ಟವರಿಗೆ ಭಾರದ ಗುಂಡು ಎಸೆತ, ಬಾಂಬ್ ಇನ್ ದ ಸಿಟಿ ಸ್ಪರ್ಧೆ ನಡೆಯಲಿದೆ. ವಿವಾಹಿತ ಮಹಿಳೆಯರಿಗೆ ಬೆಂಕಿ ರಹಿತ ಅಡುಗೆ, 7 ಜನರ ತಂಡಕ್ಕೆ ಹಗ್ಗ-ಜಗ್ಗಾಟ, ಬಾಂಬ್ ಇನ್ ದ ಸಿಟಿ ಸ್ಪರ್ಧೆ ಆಯೋಜಿಸಲಾಗಿದೆ. 2, 6, 11 ವಯೋಮಿತಿಯ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್, ಮನ ರಂಜನಾ ಕ್ರೀಡೆಗಳು, ಸೂಪರ್ ಸಂಸಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜೇತ ಕ್ರಿಕೆಟ್ ತಂಡಕ್ಕೆ ಪ್ರಥಮ ಸ್ಥಾನಕ್ಕೆ 50 ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 25 ಸಾವಿರ ರೂ. ನಗದು, ಹಗ್ಗಜಗ್ಗಾಟ ವಿಜೇತರಿಗೆ ಪ್ರಥಮ ಸ್ಥಾನಕ್ಕೆ 15, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಖಂಡನೆ: ಮೈಸೂರು ರಂಗಾಯಣ ಅಧ್ಯಕ್ಷ ಅಡ್ಡಂಡ ಸಿ. ಕಾರ್ಯಪ್ಪ ಅವರು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ಇದೇ ವೇಳೆ ವೇದಿಕೆ ಅಧ್ಯಕ್ಷ ವಿ.ಪಿ. ಡಾಲು ತಿಳಿಸಿದರು.
ವೇದಿಕೆ ಉಪಾಧ್ಯಕ್ಷ ಕೆ. ಪಿ. ಅಜಿತ್, ಪ್ರ ಕಾರ್ಯದರ್ಶಿ ವಿ.ಟಿ. ಶ್ರೇಯಸ್, ಖಜಾಂಚಿ ಚಿದು, ಕ್ರೀಡಾ ಸಂಚಾಲಕರಾದ ವಿ. ಎನ್. ಪ್ರಮೋದ್, ಡಿ.ಜಿ. ನಿಖಿಲ್, ಸಹ ಸಂಚಾಲಕ ವಿ.ಎಸ್. ಕಿರಣ್, ನಿರ್ದೇಶಕ ವಿ.ಜಿ. ಮದುಸೂದನ್ ಇದ್ದರು.