

ಚಿತ್ರದುರ್ಗ: ದುರ್ಗದ ಅಧಿದೇವತೆ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಅದ್ದೂರಿಯಾಗಿ ಆಚರಿಸಲು ಮಂಗಳವಾರ ಕೋಟೆ ರಸ್ತೆಯ ದೇವಿಯ ಪಾದದ ಗುಡಿಯಲ್ಲಿ ತೀರ್ಮಾನಿಸಲಾಯಿತು.
ತಾಲೂಕು ಆಡಳಿತ ಮತ್ತು ಏಕನಾಥೇಶ್ವರಿ ಜೀರ್ಣೋದ್ಧಾರ ಸಮಿತಿಯಿಂದ ನಡೆದ ಸಭೆಯಲ್ಲಿ ಜಾತ್ರೆ ಆಚರಣೆಯ ಕುರಿತು ಹಲವರಿಂದ ವ್ಯಕ್ತವಾದ ಸಲಹೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಸ್ವೀಕರಿಸಿ, ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುವುದರ ಜತೆಗೆ ಸಹಕಾರ ನೀಡಲಾಗುವುದು ಎಂದರು.
ಯುಗಾದಿ ಹಬ್ಬವಾಗಿ 15ರಿಂದ 20 ದಿನದೊಳಗೆ ದೇವಿಯ ಜಾತ್ರೆ ನಡೆಯಲಿದೆ. ಹೀಗಾಗಿ, ಸಕಲ ಸಿದ್ಧತೆ ನಡೆಯುತ್ತಿದ್ದು, ಏ. 1ರಿಂದ ಆರಂಭವಾಗಿ, 11ರ ವರೆಗೆ ನಿತ್ಯ ಒಂದಿಲ್ಲೊಂದು ಪೂಜಾ ಕೈಂಕರ್ಯ ನಡೆಯಲಿದೆ.
ಏ. 1ರಂದು ರಾತ್ರಿ 8ಕ್ಕೆ ದೇವಿ ಮೂರ್ತಿಗೆ ಕಂಕಣಧಾರಣೆ, ಮದುವಣಗಿತ್ತಿ, ಭಂಡಾರದ ಪೂಜೆ ಹಾಗೂ ಮಹಾ ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದೆ. 1, 2, 3ರಂದು ರಾತ್ರಿ ವೇಳೆ ದೇವಿಯ ಉತ್ಸವ ಮೂರ್ತಿಯನ್ನು ಐತಿಹಾಸಿಕ ಕೋಟೆಯ ಮೇಲುದುರ್ಗದ ದೇವಿ ದೇಗುಲದಿಂದ ಕೆಳಗಿನ ದುರ್ಗಕ್ಕೆ ಬುರುಜನಹಟ್ಟಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಸಿಂಹವಾಹಿನಿ, ಸರ್ಪೋತ್ಸವ ಹಾಗೂ ನವಿಲು ವಾಹನೋತ್ಸವದ ಮೂಲಕ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ ಕರೆತರಲಿದ್ದಾರೆ.
ಬುರುಜನಹಟ್ಟಿ, ಕೋಳಿ ಬುರುಜನಹಟ್ಟಿ, ಉಚ್ಚಂಗಿಯಲ್ಲಮ್ಮ ದೇವಿ ದೇಗುಲ, ಬರಗೇರಮ್ಮ ದೇವಿ ಪಾದದ ಗುಡಿ ಸೇರಿ ಅಕ್ಕಪಕ್ಕದ ಭಕ್ತರಿಂದ ದೇವಿಗೆ ಮೂರು ದಿನವೂ ಪೂಜೆ ನೆರವೇರಲಿದೆ.
5ರಂದು ಕೋಟೆಯ ಮೇಲಿರುವ ದೇಗುಲದಲ್ಲಿ ದೇವಿಗೆ ದೊಡ್ಡಭಂಡಾರದ ಪೂಜೆ, ನಂತರ ವಿವಿಧ ಪುಷ್ಪಗಳಿಂದ ಸಿಂಗರಿಸಿ, ಅಶ್ವ ವಾಹನದ ಮೇಲೆ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರಕ್ಕೆ ಜಾತ್ರೆಯ ಸಂಪ್ರದಾಯದಂತೆ ಕರೆತರಲಾಗುವುದು.
ಅಂದು ಚಂದ್ರಮಾಸ ಹೊಂಡದಲ್ಲಿ ದೇವಿಗೆ ಗಂಗಾಪೂಜೆ, ಕುಂಭಾಭಿಷೇಕ ಜರುಗಲಿದೆ. ರಾತ್ರಿ ಜಿಲ್ಲಾಧಿಕಾರಿ ಹಾಗೂ ಗುಡಿಗೌಡರ ಮನೆಯಲ್ಲಿ ಮಹಾಮಂಗಳಾರತಿ ಪೂಜೆ ನಡೆಯಲಿದೆ. ನಂತರ ಪಾದದಗುಡಿಗೆ ಮೂರ್ತಿ ಕರೆತರಲಾಗುತ್ತದೆ. 6ರಂದು ಚಿಕ್ಕಪೇಟೆ, ಮೆದೇಹಳ್ಳಿ ಭಕ್ತರಿಂದ ಪೂಜೆ ಸ್ವೀಕಾರ ನಡೆಯಲಿದೆ.
7ಕ್ಕೆ ದೇವಿಯ ಭವ್ಯ ಮೆರವಣಿಗೆ: ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಸೇರಿ ಗಂಗಾಂಬಿಕ ಬೆಸ್ತರ ಸಮುದಾಯ ಒಳಗೊಂಡು ಭಕ್ತ ಸಮೂಹದಿಂದ 7ರಂದು ದೇವಿಗೆ ವಿವಿಧ ಬಗೆಯ ಪುಷ್ಪ, ವಸ್ತುಗಳಿಂದ ಅಲಂಕಾರದ ಸೇವೆ ನೆರವೇರಲಿದೆ.
ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ನಗರದ ರಾಜಬೀದಿಗಳಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ದೇವತೆಯ ಉತ್ಸವ ಮೂರ್ತಿಯ ಭವ್ಯ ರಥೋತ್ಸವದ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರಿಂದ ಮೀಸಲು ಅರ್ಪಣೆ ಹಾಗೂ ಹರಕೆ ಸಲ್ಲಿಕೆಯಾಗಲಿದೆ.
8ರಂದು ಏಕನಾಥೇಶ್ವರಿ ದೇವಿಯೂ ವಿವಿಧ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ಕೋಟೆಯೊಳಗಿನ ಮೂಲ ದೇಗುಲದಲ್ಲಿ ಗುಡಿದುಂಬುವ ಕಾರ್ಯಕ್ರಮದೊಂದಿಗೆ ದೇವಿಯನ್ನು ಸ್ವಸ್ಥಾನಕ್ಕೆ ಕರೆತರಲಾಗುವುದು. 11ರವರೆಗೂ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಅಂದು ದೇವಿಯ ಜಾತ್ರೆ ಮುಕ್ತಾಯವಾಗಲಿದೆ ಎಂದು ಸಮಿತಿ ತಿಳಿಸಿದೆ.
ಮುಖ್ಯಾಂಶಗಳು
ಏ. 5ಕ್ಕೆ ದೇವಿಗೆ ದೊಡ್ಡ ಭಂಡಾರದ ಪೂಜೆ
7ಕ್ಕೆ ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆ
ಮೆರುಗು ನೀಡಲಿವೆ ಜನಪದ ಕಲಾತಂಡಗಳು
ಸಿಡಿಗಾಗಿ ಜಿಲ್ಲಾಡಳಿತಕ್ಕೆ ಮನವಿ
ಕರೊನಾ ಕಾರಣಕ್ಕೆ 2020, 2021 ಸೇರಿ ಎರಡು ವರ್ಷ ಸಿಡಿ ಮಹೋತ್ಸವ ನಡೆದಿರಲಿಲ್ಲ. 2022ರಲ್ಲಿ ದೇವಿಯ ಜಾತ್ರೆ ನಡೆಯಿತಾದರೂ ಸಿಡಿಗೆ ಅವಕಾಶ ನೀಡಿರಲಿಲ್ಲ. ಭಕ್ತರು ಹರಕೆ ತೀರಿಸಲು ಈ ಬಾರಿಯಾದರೂ ಏ. 8ರಂದು ಪಾದದ ಗುಡಿ ಮುಂಭಾಗ ಎಂದಿನಂತೆ ಆಚರಿಸಲು ಅನುಮತಿ ನೀಡಬೇಕು ಎಂದು ಜೀರ್ಣೋದ್ಧಾರ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದೆ. ಈ ಸಂಬಂಧ ಯಾವುದೇ ತೀರ್ಮಾನವಾಗಿಲ್ಲ.