

ಹಾಸನ : ರೈತರು ಮತ್ತು ಹಳ್ಳಿಗಳ ಜೀವನ ಆಧರಿಸಿ ‘ಶ್ರೀಮಂತ’ ಎಂಬ ಸಾಮಾಜಿಕ ಚಿತ್ರ ತಯಾರಿಸಲಾಗಿದ್ದು, ಏ.14ರಂದು ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಹಾಸನ ರಮೇಶ್ ತಿಳಿಸಿದರು.
ನಾನು ಕಳೆದ 10 ವರ್ಷಗಳಿಂದ ಚಲನಚಿತ್ರದಲ್ಲಿ ಕಥೆ, ನಿರ್ದೇಶನ, ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನದೇ ಬ್ಯಾನರ್‌ನಲ್ಲಿ ಪ್ರಪ್ರಥಮ ಬಾರಿಗೆ ಸೋನುಸೂದ್ ನಾಯಕನಾಗಿ ನಟಿಸಿರುವ ಶ್ರೀಮಂತ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಾಸನದಲ್ಲಿ ಶೇ. 70ರಷ್ಟು ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ನಾದಬ್ರಹ್ಮ ಹಂಸಲೇಖ ಅವರು ಸಂಗೀತ ನೀಡಿದ್ದು, ಏ.4ರಂದು ಎರಡು ಹಾಡುಗಳು ಬಿಡುಗಡೆಗೊಳ್ಳಲಿವೆ. ನಂತರ ಹಾಸನಾಂಬ ದೇವಾಲಯದ ಮುಂಭಾಗದಿಂದ ಮೆರವಣಿಗೆ ನಡೆಸಲಾಗುವುದು ಎಂದರು.
ಜಿಲ್ಲೆಯ ಹಲವು ರಂಗಾಯಣ ಕಲಾವಿದರನ್ನು ಕೂಡ ಬಳಸಿಕೊಳ್ಳಲಾಗಿದೆ. ನಮ್ಮ ಚಿತ್ರದಲ್ಲಿ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಗ್ರಾಮೀಣ ಜೀವನಶೈಲಿ ಹಾಗೂ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಡಾ.ರಾಜ್‌ಕುಮಾರ್ ಅವರ ಅಭಿನಯದ ಬಂಗಾರದ ಮನುಷ್ಯ ಚಿತ್ರದ ನಂತರ ಕೃಷಿ ಪ್ರಧಾನ ಚಿತ್ರ ಬಂದಿದ್ದರೆ ಅದು ನಮ್ಮ ಶ್ರೀಮಂತ ಚಿತ್ರ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡದ ಮಂಜು, ಸತೀಶ್ ಪಟೇಲ್, ಮಂಜೇಗೌಡ, ವೆಂಕಟೇಶ್ ಹಾಜರಿದ್ದರು.