ಏ.12, 13ರಂದು ಹಾಸನದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ

16_HSN_04
Published on

ಹಾಸನ: ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏಪ್ರಿಲ್ 12 ಮತ್ತು 13ರಂದು ನಗರದ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಮೆಂಟ್ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಟಿ.ವಿ. ಶಿವಾನಂದ ತಗಡೂರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಹಾಸನದಲ್ಲಿ ಆಯೋಜಿಸಲು ತೀರ್ಮಾನ ಮಾಡಲಾಗಿದ್ದು, ಕಳೆದ ವರ್ಷ ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಅದಕ್ಕಿಂತ ಭಿನ್ನವಾಗಿ ಇಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲು ಆಲೂಚನೆ ಇಟ್ಟುಕೊಂಡು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೊಂದು ತಂಡ ಭಾಗವಹಿಸಲು ಅವಕಾಶ ಇದೆ. ಪ್ರತಿಯೊಬ್ಬರ ಐಡಿ ಕಾರ್ಡ್ ಪರೀಕ್ಷೆ ಮಾಡಲಾಗುದು. ಹೊರ ಜಿಲ್ಲೆಯಿಂದ ಬರುವ ಪತ್ರಕರ್ತ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕ್ರೀಡಾಕೂಟ ಯಶಸ್ವಿಗೆ ಜಿಲ್ಲಾ ಸಮಿತಿ, ಉಪ ಸಮಿತಿ ಮಾಡಿಕೊಂಡು ಆವರವರ ಜವಬ್ಧಾರಿಯನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಹಿಸಿಕೊಡಲಿದೆ. ಪ್ರಾರಂಭದ ದಿನದಲ್ಲಿ ಮೊದಲ ಆಟ ಸೆಲೆಬ್ರೆಟಿ ಕ್ರಿಕೆಟ್ ನಡೆಯಲಿದೆ. ಮಂಗಳೂರಿನಲ್ಲಿಯೂ ಕೂಡ ಸೆಲಬ್ರೆಟಿ ಜನಪ್ರತಿನಿಧಿಗಳಿಂದ ಪಂದ್ಯ ನಡೆದಿತ್ತು. ಒಟ್ಟಾರೆ ರಾಜ್ಯ ಮಟ್ಟದ ಈ ಕ್ರಿಕೆಟ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿ ಮನವಿ ಮಾಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂರ್ಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಮಾತನಾಡಿ, ರಾಜ್ಯಾಧ್ಯಕ್ಷರ ಸೂಚನೆ ಮೆರೆಗೆ ಹಾಸನದಲ್ಲಿ ಕ್ರಿಕೆಟ್ ಉತ್ಸವ ಮಾಡಲು ನಿರ್ಧರಿಸಲಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಕ್ರಿಕೆಟ್ ಕ್ರೀಡಾಪಟುಗಳಿಗೆ ವಸತಿ ಸೌಲಭ್ಯ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿದೆ. ಇನ್ನು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಿಂತ ಹಾಸನದಲ್ಲಿ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಟೂರ್ನಿಮೆಂಟ್ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ. ಕ್ರಿಕೆಟ್ ಪಂದ್ಯಾವಳಿಗೆ ವಿಶೇಷವಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಆಗಮಿಸಲಿದ್ದು, ಜನಪ್ರತಿನಿಧಿಗಳ ಜತೆ ಅಧ್ಯಕ್ಷರ ತಂಡವು ಮೊದಲ ಆಟವನ್ನು ಆಡುವುದು ವಿಶೇಷವಾಗಿದೆ. ಏಪ್ರಿಲ್ 12 ಮತ್ತು 13 ರಂದು ಎರಡು ದಿನಗಳ ಈ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಎಚ್.ಬಿ. ಮದನ್ ಗೌಡ, ಮಾಜಿ ಅಧ್ಯಕ್ಷರಾದ ಮಂಜುನಾಥ್, ರವಿನಾಕಲಗೂಡು, ಬಿ.ಆರ್. ಉದಯಕುಮಾರ್, ಪ್ರಸನ್ನಕುಮಾರ್, ಕಾರ್ಯದರ್ಶಿ ಪಿ.ಎ. ಶ್ರೀನಿವಾಸ್, ಕುಮಾರ್, ನಟರಾಜು, ಜಿ. ಪ್ರಕಾಶ್, ಜ್ಞಾನೇಶ್, ಖುಶ್ವಂತ್, ಕೃಷ್ಣ, ನಾಗರಾಜು, ಮಂಜು, ಮೆಹಾಬೂಬ್, ದಯಾನಂದ್, ಶರತ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net