

ನೆಲಮಂಗಲ: ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂಬ ಕುರುಬ ಸಮುದಾಯದ ನ್ಯಾಯಬದ್ಧ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಮೈಸೂರು ಜಿಲ್ಲೆ ಸೋಸಲೆ ವ್ಯಾಸರಾಜಮಠದ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಒತ್ತಾಯಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಕಾಗಿನೆಲೆ ಮಹಸಂಸ್ಥಾನ ಕನಕ ಗುರುಪೀಠ, ಕುರುಬ ಸಮುದಾಯದ ಸಂಘಟನೆಗಳು ಹಾಗೂ ತಾಲೂಕು ಕುರುಬ ಸಂಘ ಆಯೋಜಿಸಿದ್ದ ಪಾದಯಾತ್ರಿಗಳ ಸಮಾವೇಶದಲ್ಲಿ ಮಾತನಾಡಿದರು.
ವ್ಯಾಸರಾಜ ಗುರುಗಳು ಮತ್ತು ಕನಕದಾಸರ ನಡುವಿನ ಬಾಂಧವ್ಯ ಅನನ್ಯವಾದದ್ದು. ಕೃಷ್ಣದೇವರಾಯನ ಕಾಲದಲ್ಲಿ ಗಣನಾಯಕನಾಗಿದ್ದ ಕನಕದಾಸರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಕನಕರ ಕಾವ್ಯ, ಕೃತಿ ಮತ್ತು ಪದ್ಯಗಳು ವೈಶಿಷ್ಟ್ಯಪೂರ್ಣವಾಗಿವೆ.
ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕನಕರು ಕೀರ್ತನೆಗಳ ಮೂಲಕ ಸಮಾಜೋದ್ಧಾರ ಮಾಡಿದ ಮಹಾನುಭಾವರು. ಇಂತಹ ಮಹಾತ್ಮರು ಜನಿಸಿದ ಸಮುದಾಯ ಇಂದಿಗೂ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವುದು ಬೇಸರದ ಸಂಗತಿ. ದೇವರಾಜ ಅರಸು ಕಾಲದಲ್ಲೇ ಕುರುಬ ಸಮುದಾಯ ಎಸ್‌ಟಿ ಪಟ್ಟಿಗೆ ಸೇರಬೇಕಾಗಿತ್ತು. ಕೆಲ ಪದಗಳ ಗೊಂದಲದಿಂದ ಅನ್ಯಾಯವಾಗಿದೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪಾದಯಾತ್ರೆಗೆ ಸರ್ವಜನಾಂಗದ ಬೆಂಬಲ ದೊರೆತಿರುವುದು ಸಂತಸದ ಸಂಗತಿ. ಇದರಿಂದ ಸಮಾಜ ಸಂಘಟನೆ ಜತೆಗೆ ಜಾಗೃತಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮುದಾಯದ ಬೇಡಿಕೆಗಳನ್ನು ಈಡೇರಿಸಿ ಹೋರಾಟಕ್ಕೆ ತೆರೆ ಎಳೆಯಬೇಕು ಎಂದು ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಪಾದಯಾತ್ರೆ ಸಂಯೋಜಕ ಮಂಜಪ್ಪ ಮಾಗೋದಿ, ತಾಪಂ ಸದಸ್ಯ ಅನಿತಾ ತ್ಯಾಗರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚಿಕ್ಕನಾಗಯ್ಯ, ಉಪಾಧ್ಯಕ್ಷ ಗಂಗಾಧರ್, ಪ್ರ.ಕಾರ್ಯದರ್ಶಿ ನಾಗರಾಜು, ಕಾರ್ಯದರ್ಶಿ ಬಿಟಿಬಿ ರಾಜು, ಪುರಸಭೆ ಮಾಜಿ ಸದಸ್ಯ ಎನ್.ಎಸ್. ಮೂರ್ತಿ, ಮುಖಂಡ ಕೇಬಲ್ ಸುರೇಶ್ ಮತ್ತಿತರರು ಇದ್ದರು.
ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿ: ಬ್ರಿಟಿಷರ ಆಳ್ವಿಕೆ ಮತ್ತು ಸ್ವಾತಂತ್ರ್ಯ ನಂತರದಲ್ಲೂ ಕುರುಬ ಸಮುದಾಯ ಎಸ್‌ಟಿ ಪಟ್ಟಿಯಲ್ಲಿತ್ತು. ಕುರುಬ ಎಂಬ ಪದ ಹೊರತುಪಡಿಸಿ ಉಳಿದೆಲ್ಲ ಸಮಾನ ಪದಗಳ ಸಮುದಾಯಕ್ಕೆ ಎಸ್‌ಟಿ ಸೌಲಭ್ಯ ನೀಡಲಾಗಿದೆ. ಆದ್ದರಿಂದ 1996 ಮತ್ತು 2013ರಲ್ಲಿ ರಾಜ್ಯ ಸರ್ಕಾರದಿಂದ ಬೀದರ್, ಕಲಬುರಗಿ, ಯಾದಗಿರಿ ಮತ್ತು ಕೊಡಗಿನ ಕುರುಬರನ್ನು ಎಸ್‌ಟಿಗೆ ಸೇರಿಸುವ ಬೇಡಿಕೆಯನ್ನು ಕೇಂದ್ರ ಸರ್ಕಾರ ಕೂಡಲೇ ಜಾರಿಗೊಳಿಸಬೇಕು. ಕೊಡಗು ಜಿಲ್ಲೆಯಲ್ಲಿ ಕುರುಬ ಸಮುದಾಯಕ್ಕೆ ಸೀಮಿತವಾಗಿರುವ ಎಸ್‌ಟಿ ಮೀಸಲಾತಿ ಸೌಲಭ್ಯ ತೆಗೆದುಹಾಕಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ (ಅಂದಾಜು 60 ಲಕ್ಷ) ಕುರುಬರಿಗೂ ವಿಸ್ತರಿಸುವ 2 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ಮಾಡಲಾಗುತ್ತಿದೆ ಎಂದು ಹೊಸದುರ್ಗ ಕಾಗಿನೆಲೆ ಪೀಠದ ಶ್ರೀ ಈಶ್ವರಾನಂದಾಪುರಿ ಸ್ವಾಮೀಜಿ ತಿಳಿಸಿದರು.