

ಮೈಸೂರು: ಮುಂದಿನ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಶೇ.100ರಷ್ಟು ಬರುವಂತೆ ಶಿಕ್ಷಕರು ಶ್ರಮವಹಿಸಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಚೇರಿಯಿಂದ ನಗರದ ಸಿಕೆಸಿ ಕೇಂದ್ರೀಯ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆ ಮುಖ್ಯಸ್ಥರು, ವಿದ್ಯಾರ್ಥಿಗಳ ಸನ್ಮಾನ ಹಾಗೂ ಕಲಿಕಾ ಸ್ಫೂರ್ತಿ ಕಾರ್ಯಕ್ರಮದಡಿ ಬೋಧಕರ ಎರಡು ದಿನದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಕಾರಣ, ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಮುಂದೆ ಶೇ.100ರಷ್ಟು ಫಲಿತಾಂಶ ಪಡೆಯಲು ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಬರುವಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಚ್.ಕೆ.ಪಾಂಡು ಮಾತನಾಡಿ, ಈ ಸಾಲಿನಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ಸಂಪೂರ್ಣ ಸಹಕಾರ ನೀಡಬೇಕು. ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಕೋರಿದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಬಿಆರ್‌ಸಿ ಶ್ರೀಕಂಠಸ್ವಾಮಿ, ಶ್ರೀಕಂಠಶಾಸ್ತ್ರಿ, ಮನೋಹರ್ ಕುಮಾರ್, ಶಿಕ್ಷಕರ ಸಂಘದ ನಿರ್ದೇಶಕರಾದ ನಾಗರಾಜು, ನಾಗಸುಂದರ್ ಇತರರು ಇದ್ದರು.