

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ 32 ಸರ್ಕಾರಿ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳು ಹಾಗೂ ಅತಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
32 ಸರ್ಕಾರಿ ಶಾಲೆಗಳಿಗೆ ಶೇ.100ರಷ್ಟು ಫಲಿತಾಂಶ ಬಂದಿರುವುದು ಸಂತಸದ ವಿಷಯ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಪಾಲಕರಿಗೆ ಉತ್ತಮ ಹೆಸರು ತರಬೇಕು. ಶಿಕ್ಷಕರು ಉತ್ತಮ ಪ್ರಯತ್ನ ಮಾಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದಿನ ವರ್ಷಗಳಲ್ಲೂ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಈಗಿನಿಂದಲೇ ಶ್ರಮಿಸಬೇಕು. ಮೈಸೂರು ಜಿಲ್ಲೆ ರಾಜ್ಯದ ಅಗ್ರ 5 ಸ್ಥಾನದೊಳಗೆ ಬರಲು ಪ್ರಯತ್ನ ಮಾಡಬೇಕಿದೆ ಎಂದರು.
ಇಂಗ್ಲಿಷ್ ಬಗ್ಗೆ ಹಿಂಜರಿಕೆ ಬೇಡ. ಹೆಚ್ಚಿನ ಅಭ್ಯಾಸ ಮಾಡಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ಪಾಠದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಆಟದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸನ್ಮಾನ:
ಅತಿ ಹೆಚ್ಚು ಅಂಕ ಗಳಿಸಿದ ಮೈಸೂರು ಗ್ರಾಮಾಂತರದ ಯರಗನಹಳ್ಳಿ ಸರ್ಕಾರಿ ಶಾಲೆಯ ಎಸ್.ಅಜಯ್ (621), ನಂಜನಗೂಡು ತಾಲೂಕಿನ ಆದರ್ಶ ವಿದ್ಯಾಲಯದ ಅಚ್ಯುತ್ ಮೌರ್ಯ (616), ಕೃಷ್ಣರಾಜನಗರದ ಆದರ್ಶ ವಿದ್ಯಾಲಯದ ಮೋಕ್ಷ ಎಚ್. ಪಾಟೀಲ್ (615), ತಿ.ನರಸೀಪುರ ತಾಲೂಕಿನ ಆದರ್ಶ ವಿದ್ಯಾಲಯದ ಡಿ.ಮೋನಿಷಾ (614), ಜಿ.ಆರ್.ಕೀರ್ತನ್‌ಕುಮಾರ್ (613), ಬಿ.ಆರ್.ಪ್ರಜ್ವಲ್‌ಗೌಡ (611), ಕೃಷ್ಣರಾಜನಗರದ ಆದರ್ಶ ವಿದ್ಯಾಲಯದ ವಿ.ಲಿಶಾ (612), ಕೆ.ಎಂ.ಸ್ಮಿತಾ (608), ಮೈಸೂರು ತಾಲೂಕಿನ ಬೆಳವಾಡಿ ಸರ್ಕಾರಿ ಪ್ರೌಢಶಾಲೆಯ ಜಿ.ಕೀರ್ತನಾ (610) ಹಾಗೂ ಮೈಸೂರು ದಕ್ಷಿಣ ವಲಯದ ಆದರ್ಶ ವಿದ್ಯಾಲಯದ ಆರ್.ಪುಣ್ಯ (609) ಅವರನ್ನು ಸನ್ಮಾನಿಸಲಾಯಿತು.
ಡಿಡಿಪಿಐ ರಾಮಚಂದ್ರರಾಜೇ ಅರಸ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.