ಎಸ್ಸೆಸ್ಸೆಲ್ಸಿಯಲ್ಲಿ ಅಗ್ರಸ್ಥಾನ ಗಳಿಸಲು ಪ್ರಯತ್ನಿಸಿ

15 KRN-1
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕೆ.ಆರ್.ನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದು, ಈ ಬಾರಿ ಎಲ್ಲರೂ ಸೇರಿ ಜಿಲ್ಲೆಯಲ್ಲಿಯೇ ಅಗ್ರಸ್ಥಾನಕ್ಕೆ ಏರಿಸಲು ಸಾಮೂಹಿಕ ಪ್ರಯತ್ನ ಮಾಡೋಣ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಭರವಸೆಯ ಬೆಳಕು ಹೊತ್ತಿಗೆ ಬಿಡುಗಡೆ ಮತ್ತು ಮುಖ್ಯಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಪ್ರಯತ್ನದ ಜತೆಗೆ ಪಾಲಕರ ಸಹಕಾರವೂ ಫಲಿತಾಂಶ ಏರಿಕೆಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂದರು.

ಶಿಕ್ಷಕರು ವಿದ್ಯಾರ್ಥಿಗಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೆ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜತೆಗೆ ಅವರಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಗಮನಹರಿಸುವಂತೆ ಪ್ರೆರೇಪಣೆ ನೀಡಿ, ಅವರ ಬದುಕನ್ನು ಹಸನು ಮಾಡಬೇಕು. ಶೈಕ್ಷಣಿಕ ಏಳಿಗೆಯ ವಿಚಾರದಲ್ಲಿ ನಾನು ಸದಾ ಶಿಕ್ಷಕ ಬಾಂಧವರ ಜತೆ ಇರುತ್ತೇನೆ ಎಂದು ಭರವಸೆ ನೀಡಿದರು.

ಬಿಇಒ ಆರ್.ಕೃಷ್ಣಪ್ಪ ಮಾತನಾಡಿ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಈ ಹಿಂದೆ 7ನೇ ಸ್ಥಾನದಲ್ಲಿತ್ತು. ಶಾಸಕರು, ಶಿಕ್ಷಕರು ಮತ್ತು ಪಾಲಕರ ಸಹಕಾರದೊಂದಿಗೆ ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ. ಈ ಬಾರಿ ನಾವು ಮೊದಲನೇ ಸ್ಥಾನಕ್ಕೆ ಬರಲು ಸಂಘಟಿತ ಪ್ರಯತ್ನ ಮಾಡಿದ್ದು, ಇದಕ್ಕೆ ಶಿಕ್ಷಕ ಸಮೂಹ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಎರಡು ತಾಲೂಕುಗಳಿಂದ ಒಟ್ಟು 71 ಪ್ರೌಢಶಾಲೆಗಳಿದ್ದು, ಆ ಪೈಕಿ ಕಲಿಕೆಯಲ್ಲಿ ವಿವಿಧ ಶಾಲೆಗಳ 664 ಮಕ್ಕಳು ಹಿಂದುಳಿದ್ದಿದ್ದಾರೆ. ಅವರನ್ನು ಶೈಕ್ಷಣಿಕವಾಗಿ ಮೇಲ್ಮಟ್ಟಕ್ಕೆ ತರಲು ನಾವು ಭರವಸೆಯ ಬೆಳಕು ಎಂಬ ಕಿರುಹೊತ್ತಗೆಯನ್ನು ಹೊರ ತಂದಿದ್ದು, ಇದಕ್ಕಾಗಿ ಸಹಕಾರ ನೀಡಿದ ಶಿಕ್ಷಕರು ಮತ್ತು ವಿವಿಧ ಪ್ರೌಢಶಾಲಾ ಹಂತದ ತಂಡಗಳಿಗೆ ಶಿಕ್ಷಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಬಿಆರ್‌ಸಿ ವೆಂಕಟೇಶ್, ಅಕ್ಷರ ದಾಸೋಹ ನಿರ್ದೇಶಕ ಸ್ವಾಮಿಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರಸ್ವಾಮಿ, ಇಸಿಒಗಳಾದ ದಾಸಪ್ಪ, ಜನಾರ್ದನ್, ಪೂರ್ಣಿಮಾ, ಸಿಆರ್‌ಪಿಗಳಾದ ವಸಂತ್‌ಕುಮಾರ್, ಉದಯಶಂಕರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ್, ಸಂತ ಜೋಸೇಫರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್‌ಜೀವನ್, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಎಲ್ಲ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net