

ಹಾಸನ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇನ್ನೂ ಉತ್ತಮಪಡಿಸಲು ನವೆಂಬರ್‌ನಿಂದ ಪ್ರತಿ ತಿಂಗಳು ಶಾಲಾ ಮಟ್ಟದಲ್ಲಿಯೇ ಮಕ್ಕಳಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಸಲು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದಶಿ ಡಾ.ನಾಗಭೂಷಣ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಮಕ್ಕಳು ಒಂದು ವಿಷಯವನ್ನು ಮೂರು ಬಾರಿ ಪುನರಾವರ್ತನೆ ಮಾಡಲು ತಿಳಿವಳಿಕೆ ನೀಡುವಂತೆ ತಿಳಿಸಿದ ಅವರು ಶಾಲೆಗೆ ಗೈರು ಹಾಜರಾಗುವ ಮಕ್ಕಳ ಬಗ್ಗೆ ನಿಗಾ ವಹಿಸಿ ಪೋಷಕರನ್ನು ವಿಚಾರಿಸಿ ಹಾಗೂ ಶಾಲಾ ಸಮವಸ್ತ್ರ ಹಾಗೂ ಶೂ ಗುಣಮಟ್ಟದ ಬಗ್ಗೆ ಪರಿಶೀಲಿಸುವಂತೆ, ಮಧ್ಯಾಹ್ನದ ಬಿಸಿಯೂಟ ಜತೆಗೆ ನಿಗಧಿತ ದಿನಗಳಲ್ಲಿ ಮೊಟ್ಟೆ, ಹಾಲು ನೀಡಲು ಕ್ರಮವಹಿಸುವಂತೆ ಮತ್ತು ಮಕ್ಕಳ ಆರೋಗ್ಯ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಉತ್ತೇಜನ ನೀಡಬೇಕು. ಹಣ ಉಳಿತಾಯ ಮಾಡುವ ಬಗ್ಗೆ ಹಾಗೂ ನಿರ್ವಹಣೆ ಕುರಿತು ತಿಳಿವಳಿಕೆ ನೀಡಬೇಕು. ರಜೆ ದಿನಗಳಲ್ಲಿ ಮಕ್ಕಳು ಪೋಷಕರಿಗೆ ನೆರವಾಗುವಂತೆ ಪ್ರೇರೇಪಣೆ ನೀಡಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸವಲತ್ತು ಪಡೆದಿರುವ ಫಲಾನುಭವಿಗಳ ಪಟ್ಟಿಯನ್ನು ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ನೋಟಿಸ್ ಬೋರ್ಡ್‌ನಲ್ಲಿ ಹಾಕಿ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿ. ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳದ ಬೆಳೆ ಕಟಾವು ಮಾಡಿ ವ್ಯವಸ್ಥಿತವಾಗಿ ದಾಸ್ತಾನು ಮಾಡಿದರೆ ಮುಂದಿನ ದಿನಗಳಲ್ಲಿ ಬಳಕೆಗೆ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಿ. ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯುವ ಜನತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಶಾಲೆ, ಅಂಗನವಾಡಿ, ಹಾಸ್ಟೆಲ್ ಹಾಗೂ ಆಸ್ಪತ್ರೆಗಳಿಗೆ ಅಧಿಕಾರಿಗಳು ಈಗಾಗಲೆ ನಿಗಧಿಪಡಿಸಿರುವಂತೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದರಲ್ಲದೆ, ಎಲ್ಲರೂ ಒಂದು ತಂಡದಂತೆ ಕೆಸಲ ಮಾಡಿ ಎಂದು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿರುವ ಗಣಿ ಘಟಕಗಳ ಪರವಾನಗಿ ಅವಧಿ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆೆ ತಿಳಿಸಿದ ಅವರು ನಿಗಧಿತ ರಾಜಧನ ಸಂಗ್ರಹಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಣಕಾಸು ಸಾಕ್ಷರತೆ ಸಾಧಿಸಲು ಗಳಿಸಿದ ಆದಾಯದಲ್ಲಿ ಶೇ.20 ರಷ್ಟು ಉಳಿತಾಯ ಮಾಡುವಂತೆ ಮಹಿಳೆಯರಿಗೆ, ಕೃಷಿಕರಿಗೆ ಅರಿವು ಮೂಡಿಸುವಂತೆ ತಿಳಿಸಿದ ಅವರು, 45 ವರ್ಷ ಮೆಲ್ಪಟ್ಟವರು ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿವಳಿಕೆ ಮೂಡಿಸಿ. ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸರ್ಕಾರದ ನಿಮಾವಳಿಯಂತೆ ವೇತನ, ಆರೋಗ್ಯ ಸವಲತ್ತುಗಳು, ರಜೆ ಮತ್ತಿತರ ಸೌಲಭ್ಯಗಳು ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಬಾಲ ಕಾರ್ಮಿಕರ ಬಗ್ಗೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡಿದರು.
ಪ್ರಸವ ಪೂರ್ವ ಭೂಣ ಲಿಂಗ ಪತ್ತೆಯನ್ನು ನಿಷೇದಿಸಲಾಗಿದ್ದು, ಈ ನಿಟ್ಟಿನಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಿ. ಲಿಂಗ ಪತ್ತೆ ಮಾಡಿರುವುದು ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಿ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಮಾತನಾಡಿ, ಪಶು ಸಂಗೋಪನೆಗೆ ಹೆಚ್ಚು ಉತ್ತೇಜನ ನೀಡುವುದರ ಜತೆಗೆ ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡುವಂತೆ ಪ್ರೋತ್ಸಾಹ ನೀಡಿ. ಹಾಗೂ ಜಾನುವಾರುಗಳ ಮೇವು ಬೇರೆ ಜಿಲ್ಲೆಗೆ ಸಾಗಾಣಿಕೆಯಾಗದಂತೆ ನಿಗಾವಹಿಸಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಉಪಸ್ಥಿತರಿದ್ದರು.ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.