

ಬೀದರ್: ಸಮಗ್ರ ಶಿಕ್ಷಣ ಕರ್ನಾಟಕ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಿಂದ ಜಿಲ್ಲೆಯ ಆಯ್ದ ಸರ್ಕಾರಿ ಪ್ರೌಢ ಶಾಲೆಗಳ ಎಸ್ಸೆಸ್ಸೆಲ್ಸಿ ಒದುತ್ತಿರುವ 27 ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಶುಕ್ರವಾರ ನಡೆಯಿತು.
ಉದ್ಘಾಟಿಸಿದ ಸಂಸದ ಭಗವಂತ ಖೂಬಾ ಮಾತನಾಡಿ, ಜಿಲ್ಲೆಯ ಮಕ್ಕಳು ಟ್ಯಾಬ್ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಮಕ್ಕಳು ತಂತ್ರಜ್ಞಾನದ ಭರಪೂರ ಲಾಭ ಪಡೆದು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಅಗಸ್ತ್ಯ ಫೌಂಡೇಷನ್ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಶೈಕ್ಷಣಿಕ ಕೆಲಸ ಮಾಡುತ್ತಿದೆ. ಮಕ್ಕಳು ತಮಗೆ ಸಿಗುವ ಸೌಲಭ್ಯಗಳನ್ನು ಪಡೆದು ಸಾಧನೆ ಮಾಡಿ ಜಿಲ್ಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಬಾಬುರಾವ್ ಎನ್.ಎಸ್. ಮಾತನಾಡಿ, ಗ್ರಾಮೀಣ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ಯಾಬ್ ವಿತರಣೆ ಮಾಡಲಾಗಿದೆ ಎಂದರು.
ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಬಾಬುಮಿಯ್ಯಾ, ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ಮಾತನಾಡಿದರು. ಬಿಇಒ ಸೂರ್ಯಕಾಂತ ಮದಾನೆ, ಗುಂಡಪ್ಪ ಹುಡುಗೆ ಇತರರಿದ್ದರು. ವೈಷ್ಣವಿ ನಿರೂಪಣೆ ಮಾಡಿ, ವಂದಿಸಿದರು.