ಎಸ್ಸೆಸ್ಸೆಲ್ಸಿ ಫಲಿತಾಂಶದತ್ತ ಅಧಿಕಾರಿಗಳ ಚಿತ್ತ

oppo_2
oppo_2
Published on

ಹನೂರು: ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದ ಹನೂರು ಶೈಕ್ಷಣಿಕ ವಲಯ ಕಳೆದ ಸಾಲಿನಲ್ಲಿ ಕಳಪೆ ಸಾಧನೆಯಿಂದಾಗಿ ಜಿಲ್ಲೆಯಲ್ಲೇ ಕೊನೆಯ ಸ್ಥಾನ ಪಡೆದುಕೊಳ್ಳಬೇಕಾಯಿತು. ಹಾಗಾಗಿ ಈ ವರ್ಷ ಇಲಾಖೆಯ ಅಧಿಕಾರಿಗಳ ಚಿತ್ತ ಉತ್ತಮ ಫಲಿತಾಂಶವನ್ನು ಪಡೆಯುವುದರತ್ತ ಹರಿದಿದ್ದು, ಹಲವು ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ.

ಹನೂರು ಶೈಕ್ಷಣಿಕ ವಲಯ ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು, ಬಹುತೇಕ ಶಾಲೆಗಳು ಕಾಡಂಚಿನಲ್ಲಿವೆ. ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಶಿಕ್ಷಕರಿಗೆ ಸವಾಲಿನ ಕೆಲಸ. ಆದರೂ ಕೆಲ ಸಮಸ್ಯೆಗಳ ನಡುವೆಯೇ ಶಿಕ್ಷಕರು ಉತ್ತಮ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿದ್ದಾರೆ. ಹಾಗಾಗಿ ತಾಲೂಕು ಆರ್ಥಿಕವಾಗಿ ಹಿಂದುಳಿದಿರಬಹುದು. ಆದರೆ ಶೈಕ್ಷಣಿಕವಾಗಿ ಮುಂದಿದೆ. ವಲಯದಲ್ಲಿ ಪ್ರಸ್ತುತ 18 ಸರ್ಕಾರಿ, 10 ಅನುದಾನಿತ, 11 ಅನುದಾನ ರಹಿತ ಪ್ರೌಢಶಾಲೆ, 2 ಮುರಾರ್ಜಿ ದೇಸಾಯಿ, ಏಕಲವ್ಯ ಹಾಗೂ ಇಂದಿರಾಗಾಂಧಿ ಮಾದರಿ ವಸತಿ ಶಾಲೆ ಸೇರಿದಂತೆ ಒಟ್ಟು 44 ಪ್ರೌಢಶಾಲೆಗಳಿವೆ. ಪ್ರಸಕ್ತ ಸಾಲಿನಲ್ಲಿ 2,208 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದ್ದ ವಲಯ: ಕಳೆದ ಐದಾರು ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಅವಲೋಕಿಸಿದಾಗ 2017-18ನೇ ಸಾಲಿನಲ್ಲಿ ಶೇಕಡ 94, 2018-19 ಸಾಲಿನಲ್ಲಿ 90.58, 2019-20ನೇ ಸಾಲಿನಲ್ಲಿ ಶೇ.97.15, 2020-21ನೇ ಸಾಲಿನಲ್ಲಿ ಶೇ. 98.59, 2021-22ನೇ ಸಾಲಿನಲ್ಲಿ ಶೇ. 98.22 ರಷ್ಟು ಫಲಿತಾಂಶವನ್ನು ಪಡೆಯುವುದರ ಮೂಲಕ ಸತತ 5 ವರ್ಷಗಳ ಕಾಲ ಜಿಲ್ಲೆಯಲ್ಲಿಯೇ ಸತತವಾಗಿ ಪ್ರಥಮ ಸ್ಥಾನ ಪಡೆದಿತ್ತು. ಈ ಮೂಲಕ ಹನೂರು ವಲಯ ಪ್ರಥಮದ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.

ಆದರೆ 2022-23ನೇ ಸಾಲಿನಲ್ಲಿ ಶೇ.95.07ರಷ್ಟು ಫಲಿತಾಂಶ ಪಡೆದು 3ನೇ ಸ್ಥಾನ ಪಡೆಯಬೇಕಾಯಿತು. ಇದರಿಂದ ಪ್ರಥಮ ಗರಿ ಕಳಚಿತು. ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ 2023-24ನೇ ಸಾಲಿನಲ್ಲಿ ಅಧಿಕಾರಿಗಳು ಶಾಲಾ ವಾಸ್ತವ್ಯ, ಮಕ್ಕಳ ಮನೆಗಳಿಗೆ ಭೇಟಿ, ಹೋಬಳಿ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿತ್ತು.

ಡಿಡಿಪಿಐ ರಾಜಚಂದ್ರರಾಜೇ ಅರಸ್ ಅವರು ಹನೂರು ವಲಯ ಈ ಬಾರಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುತ್ತದೆ ಎಂದು ದೃಢವಾದ ಆತ್ಮವಿಶ್ವಾಸವನ್ನು ಹೊಂದಿದ್ದರು. ಆದರೆ ಶೇ.77.13ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲೇ ಕೊನೆಯ ಸ್ಥಾನ ಪಡೆಯಬೇಕಾಯಿತು. ಇದರಿಂದ ಹೊಂದಿದ್ದ ಭರವಸೆ ಹುಸಿಯಾಯಿತು. ಹಾಗಾಗಿ ಈ ಸಾಲಿನಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವುದರತ್ತ ಅಧಿಕಾರಿಗಳ ಚಿತ್ತ ಹರಿದಿದ್ದು, ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಂಬಂಧ ಬಿಇಒ ಗುರುಲಿಂಗಯ್ಯ ಅವರು ಇನ್ನಿಲ್ಲದ ಮುತುರ್ವಜಿ ವಹಿಸಿದ್ದಾರೆ.

ಪುನಶ್ಚೇತನ ಕಾರ್ಯಾಗಾರ ಆಯೋಜನೆ:

ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆಯ ಹಿನ್ನಲೆ ಶೈಕ್ಷಣಿಕ ವರ್ಷ ಆರಂಭದಲ್ಲೇ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಸಭೆ ನಡೆಸಿ ಆತ್ಮವಲೋಕನ ಮಾಡಿಕೊಳ್ಳಲಾಗಿದೆ. ಕಳಪೆ ಸಾಧನೆಗೆ ಕಾರಣವನ್ನು ತಿಳಿಯಲಾಗಿದ್ದು, ಈಗಾಗಲೇ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯವಾರು ಶಿಕ್ಷಕರಿಗೆ ಪುನಶ್ವೇತನ ಕಾರ್ಯಾಗಾರವನ್ನು ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿ ಕುರಿತು ಚರ್ಚಿಸಲಾಗಿದೆ. ಪಾಲಕರ ಸಭೆ ನಡೆಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳನ್ನು ಸೇತುಬಂಧ ಸಾಫಲ್ಯ ಪರೀಕ್ಷೆಯ ಆಧಾರದ ಮೇಲೆ ಶ್ರೇಣೀಕರಿಸಲು ಮಾರ್ಗದರ್ಶನ ನೀಡಲಾಗಿದೆ. ಶಿಕ್ಷಕರು ಮನೆಗೆ ಭೇಟಿ ನೀಡಿ ಮಕ್ಕಳು ಶಾಲೆಗೆ ಗೈರಾಗದಂತೆ ಹಾಗೂ ಮಕ್ಕಳಿಗೆ ಮೊಬೈಲ್ ನೀಡದಂತೆ ಪಾಲಕರಲ್ಲಿ ಅರಿವು ಮೂಡಿಸಲು ತಿಳಿಸಲಾಗಿದೆ. ಶೈಕ್ಷಣಿಕ ಹಿನ್ನಡೆ ಸಾಧಿಸಿದ ಶಾಲೆಗಳಿಗೆ ಸಂಪನ್ಮೂಲ ಶಿಕ್ಷಕರು ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ. ತೆರೆದ ಪುಸ್ತಕ ಪರೀಕ್ಷೆ, ವಿಷಯವಾರು ರಸಪ್ರಶ್ನೆ ಕಾರ್ಯಕ್ರಮ, ವಿಶೇಷ ತರಗತಿ ಕೈಗೊಳ್ಳುವಿಕೆ ಸೇರಿದಂತೆ ಇನ್ನಿತರ ಹಲವು ಕಾರ್ಯತಂತ್ರಗಳನ್ನು ರೂಪಿಸಲಾಗಿದ್ದು, ಶಾಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಉತ್ತಮ ಫಲಿತಾಂಶಕ್ಕಾಗಿ ರೂಪಿಸಿರುವ ಕಾರ್ಯತಂತ್ರಗಳು: ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸುಧಾರಿಸುವ ಸಲುವಾಗಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಹನೂರು ಶಾಲಾ ಶಿಕ್ಷಣ ಇಲಾಖೆ ಈಗಾಗಲೇ ತಿಂಗಳುವಾರು ಕ್ರಿಯಾಯೋಜನೆಯನ್ನು ತಯಾರಿಸಲಾಗಿದ್ದು, ಅಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದ್ದು, ಈಗಾಗಲೇ ಶಾಲೆಯಲ್ಲಿ ಕಾರ್ಯಗತಗೊಳ್ಳುತ್ತಿದೆ. ಈ ತಿಂಗಳಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಯಲ್ಲಿ ತಾಯಂದಿರ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ.

ನವೆಂಬರ್‌ನಲ್ಲಿ ಸಂದರ್ಶನ ಸಪ್ತಾಹದಡಿ ಮುಖ್ಯ ಶಿಕ್ಷಕರು ಒಳಗೊಂಡಂತೆ ತ್ರಿಸದಸ್ಯ ಸಮಿತಿ ರಚಿಸಿ ಸಂಕಲನಾತ್ಮಕ ಪರೀಕ್ಷೆ- 1ರ ಉತ್ತರ ಪತ್ರಿಕೆಗಳನ್ನು ಕ್ರೋಡೀಕರಿಸಿ, ವಿಶ್ಲೇಷಣಾ ವರದಿಯನ್ನು ಪರಿಶೀಲಿಸಲಾಗುತ್ತದೆ. ಡಿಸೆಂಬರ್‌ನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ ರಾಜ್ಯ ಅಥವಾ ಅಂತರ ಜಿಲ್ಲಾ ಸಂಪನ್ಮೂಲ ಶಿಕ್ಷಕರಿಂದ ಕಾರ್ಯಾಗಾರ ಆಯೋಜನೆ, ಜನವರಿಯಲ್ಲಿ ಸಂಪನ್ಮೂಲ ಶಿಕ್ಷಕರ ಸಹಾಯದಿಂದ ಪಾಸಿಂಗ್ ಪ್ಯಾಕೇಜ್ ಹಾಗೂ ಸ್ಕೋರಿಂಗ್ ಪ್ಯಾಕೇಜ್ ಸಿದ್ಧಗೊಳಿಸಿ ವಿದ್ಯಾರ್ಥಿಗಳಿಗೆ ನೀಡುವುದು, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಸಂಬಂಧಿದಂತೆ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯನ್ನು ಆಯೋಜಿಸುವುದು.

ಫೆಬ್ರವರಿಯಲ್ಲಿ ಪೂರ್ವ ಸಿದ್ಧತೆಯಲ್ಲಿ ಮಕ್ಕಳು ಗಳಿಸಿದ ಅಂಕಗಳನ್ನು ವಿಶ್ಲೇಷಿಸಿ ಮಾರ್ಗದರ್ಶನ ನೀಡುವುದು. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಹಾಗೂ ಪರೀಕ್ಷಾ ತಯಾರಿಯ ಸಂಬಂಧ ಸಂಜೀವಿನಿ ಶಿಬಿರ ಆಯೋಜನೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಷಯವಾರು ಮಾರ್ಗದರ್ಶನ ನೀಡಲು ಫೋನ್ ಇನ್ ಕಾರ್ಯಕ್ರಮ ಆಯೋಜನೆ, ಹಾಗೂ ಕೊನೆಯದಾಗಿ ಮಾರ್ಚ್‌ನಲ್ಲಿ ಜಿಲ್ಲಾ ಹಾಗೂ ರಾಜ್ಯ ಹಂತದಲ್ಲಿನ ಪೂರ್ವ ಸಿದ್ಧತೆ ಪರೀಕ್ಷೆ ನಡೆಸುವುದು, ಮಾದರಿ ಪ್ರಶ್ನೆಪ್ರತ್ರಿಕೆಗಳನ್ನು ಅಭ್ಯಸಿಸುವುದು, ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ಸಮಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ಆಹಾರ ಸೇವನೆ ಸಂಬಂಧ ವೈದ್ಯಾಧಿಕಾರಿಗಳೊಂದಿಗೆ ವಿದ್ಯಾರ್ಥಿಗಳ ಸಮಾಲೋಚನೆ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಒಟ್ಟಾರೆ ಹನೂರು ವಲಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮ ಪಡಿಸುವ ಸಲುವಾಗಿ ಇಲಾಖೆಯ ಅಧಿಕಾರಿಗಳು ಇನ್ನಿಲ್ಲದ ಆಸಕ್ತಿ ವಹಿಸಿದ್ದಾರೆ. ಆದ್ದರಿಂದ ಈ ಸಾಲಿನಲ್ಲಿ ವಲಯಕ್ಕೆ ಉತ್ತಮ ಫಲಿತಾಂಶ ದೊರೆಯುವುದೇ ಎಂಬುದನ್ನು ಕಾದು ನೋಡಬೇಕಿದೆ.

ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮೇರೆಗೆ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಈ ಸಂಬಂಧ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಅಗತ್ಯ ಸೂಚನೆಯನ್ನು ನೀಡಲಾಗಿದೆ. ಪುನಶ್ಚೇತನ ಕಾರ್ಯಾಗಾರ ನಡೆಸಲಾಗಿದೆ. ಆಯಾ ತಿಂಗಳು ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸಿದ್ಧತೆ, ಅನುಷ್ಠಾನ ಸಂಬಂಧ ಮುತುರ್ವಜಿ ವಹಿಸಲಾಗಿದೆ. ಗುರುಲಿಂಗಯ್ಯ ಬಿಇಒ ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net