

ಹಾಸನ: ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದ ಹಾಸನ ಜಿಲ್ಲೆ ಈ ಬಾರಿ ಆರನೇ ಸ್ಥಾನ ಕ್ಕೆ ಕುಸಿದಿದೆ. ಈ ವರ್ಷ 19,560 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 16,877 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಜಿಲ್ಲೆ ಈ ಬಾರಿ ಶೇ.86.28 ಫಲಿತಾಂಶ ಪಡೆದಿದೆ. ಕಳೆದ ವರ್ಷ ಫಲಿತಾಂಶದಲ್ಲಿ ಶೇ.96.68 ಸಾಧನೆ ಮಾಡಿತ್ತು.
11,089 ಬಾಲಕಿಯರಲ್ಲಿ 9,117 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದರೆ, 9558 ಬಾಲಕರಲ್ಲಿ 7,760 ವಿದ್ಯಾರ್ಥಿಗಳು ಪಾಸಾಗಿದ್ದು ಹುಡುಗಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದವರಲ್ಲಿ 2,828 ಮಕ್ಕಳು ನಪಾಸಾಗಿದ್ದಾರೆ. ಹಾಸನದ ಯುನೈಟೆಡ್ ಶಾಲೆಯ ಎಚ್.ಜಿ. ನಿಸರ್ಗಾ ಹಾಗೂ ಬೇಲೂರಿನ ಸರ್ವೋದಯ ಕಾನ್ವೆಂಟಿನ ವಿ. ಅನನ್ಯಾ ಗೌಡ ವಿದ್ಯಾರ್ಥಿಯರು 625 ಅಂಕಗಳಿಗೆ ಸಮವಾಗಿ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎಂದಿನಂತೆ ಈ ಬಾರಿಯೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ತಾಲೂಕುವಾರು ಮಾಹಿತಿ:
ತಾಲೂಕುವಾರು ಫಲಿತಾಂಶದ ಮಾಹಿತಿ ನೋಡುವುದಾದರೆ ಸಕಲೇಶಪುರ ಶೇ.94.67ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರ ಹಾಸನ ಶೇ. 90.57 ಫಲಿತಾಂಶ ಪಡೆದು ದ್ವಿತೀಯ ಸ್ಥಾನ ಗಳಿಸಿದೆ. ಬೇಲೂರು ಶೇ.86.17 ಫಲಿತಾಂಶ ಪಡೆದುಕೊಂಡು ತೃತೀಯ ಸ್ಥಾನದಲ್ಲಿದೆ. ನಂತರದಲ್ಲಿ ಆಲೂರು ಶೇ.85.68, ಅರಸೀಕೆರೆ ಶೇ.85.21, ಚನ್ನರಾಯಪಟ್ಟಣ ಶೇ.82.66, ಹೊಳೆನರಸೀಪುರ ಶೇ.82.59 ಹಾಗೂ ಅರಕಲಗೂಡು ಶೇ.79.69 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ.86.28 ಫಲಿತಾಂಶ ಪಡೆದುಕೊಂಡಿದೆ.
ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಶೇ.96.68 ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿತ್ತು. ಹಿಂದಿನ ಫಲಿತಾಂಶಕ್ಕೆ ಹೊಲಿಕೆ ಮಾಡಿದರೆ ಈ ಬಾರಿ ಶೇ.10ರಷ್ಟು ಫಲಿತಾಂಶ ಕಡಿಮೆಯಾಗಿದೆ. ಕಳೆದ ಬಾರಿ ಒಟ್ಟು 19,294 ವಿದ್ಯಾರ್ಥಿಗಳಲ್ಲಿ 18,599 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಕೇವಲ 695 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದರು. ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 624 ಅಂಕ ಗಳಿಸಿದ್ದರೆ, ಮೂವರು ವಿದ್ಯಾರ್ಥಿನಿಯರು 623 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 8 ವಿದ್ಯಾರ್ಥಿಗಳು 622 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದರು. ಈ ಬಾರಿ ಇಬ್ಬರು ವಿದ್ಯಾರ್ಥಿನಿಯರು ಮಾತ್ರ 625ಕ್ಕೆ 623 ಅಂಕಗಳನ್ನು ಪಡೆದಿದ್ದಾರೆ.
ತಾಯಿಯ ಜತೆ ಮಗನು ಪಾಸ್!
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಯಿಯ ಜತೆಗೆ ಮಗನೂ ಪಾಸ್ ಆಗಿರುವ ಅಪರೂಪದ ಘಟನೆಗೆ ಜಿಲ್ಲೆ ಸಾಕ್ಷಿಯಾಗಿದೆ. ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದ 38 ವರ್ಷದ ಪಿ.ಆರ್.ಜ್ಯೋತಿ ತಮ್ಮ ಮಗ ಸಿ.ಬಿ. ನಿತಿನ್ ಜತೆಗೆ ತಾಲೂಕಿನ ಬಾಳ್ಳುಪೇಟೆ ಸಿದ್ದಣ್ಣಯ್ಯ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ ತಾಯಿ ಮಗ ಇಬ್ಬರೂ ಪಾಸಾಗಿದ್ದಾರೆ.
ಎರಡನೇ ಬಾರಿ ಪರೀಕ್ಷೆ ಬರೆದಿದ್ದ ಜ್ಯೋತಿ 250 ಅಂಕ ಪಡೆದು ಉತ್ತೀರ್ಣರಾದರೆ ಮಗ ನಿತಿನ್ 582 ಅಂಕ ಪಡೆಯುವ ಮೂಲಕ ಅತುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ನಿತಿನ್ ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ. ಚಿನ್ನಳ್ಳಿಯಲ್ಲಿ ಬೇಕರಿ ಇಟ್ಟುಕೊಂಡಿರುವ ಭುವನೇಶ್ ಅವರ ಹೆಂಡತಿ ಮತ್ತು ಮಗ ಎಸ್‌ಎಸ್‌ಎಲ್‌ಸಿ ಯಲ್ಲಿ ಪಾಸ್ ಆಗಿರುವುದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.