

ಹರಪನಹಳ್ಳಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಕಳೆದ ಬಾರಿ ಜಿಲ್ಲೆಯಲ್ಲಿಯೇ ಕೊನೆಯ ಸ್ಥಾನ ಪಡೆಯುವ ಮೂಲಕ ನೀರಸ ಪ್ರದರ್ಶನ ತೋರಲಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳೆದ ಬಾರಿಯಂತೆ ಕಳಪೆ ಆಗದಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಶಾಲೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ತಾಲೂಕಿನ ವಿವಿಧ ಶಾಲೆಗಳಲ್ಲಿ ಮೊಟ್ಟೆ ಬದಲು ಬಾಳೆಹಣ್ಣು, ಚಕ್ಕಿ ವಿತರಿಸುತ್ತಿರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿಗೆ ಸೂಚಿಸಿದರು.
ಬಿಇಒ ಎಚ್.ಲೇಪಾಕ್ಷಪ್ಪ ಮಾತನಾಡಿ, 29 ಅಂಶಗಳ ಕಾರ್ಯಕ್ರಮ ಆರಂಭಿಸಿದ್ದು, ಈ ಬಾರಿ ಉತ್ತಮ ಫಲಿತಾಂಶಕ್ಕೆ ಒತ್ತು ನೀಡಲಾಗುವುದು ಎಂದರು. ಕೃಷಿ ಅಧಿಕಾರಿ ಎಚ್.ಉಮೇಶ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರು ಮೆಕ್ಕೆಜೋಳ ಬೆಳೆಗೆ ಹರಳು ಯೂರಿಯಾ ಬದಲು ನ್ಯಾನೋ ಯೂರಿಯಾ ಬಳಸಬೇಕೆಂದು ತಿಳಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕಿರಣ್ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಚಿಗಟೇರಿ-ನಿಚ್ಚವನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ ಎಂದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಗರ್ಭಗುಡಿ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ಆರೋಗ್ಯಾಧಿಕಾರಿ ಡಾ.ಪೃಥ್ವಿ ಮಾತನಾಡಿ, ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಬೇಕು. ಈ ಕುರಿತು ಗ್ರಾಪಂನಿಂದ ಜಾಗೃತಿ ಮೂಡಿಸಬೇಕು. ಇನ್ನೊಂದು 108 ಆ್ಯಂಬುಲೆನ್ಸ್ ಅವಶ್ಯ ಇದೆ ಎಂದು ಹೇಳಿದರು. ಮಾಚಿಹಳ್ಳಿ, ಮಾಚಿಹಳ್ಳಿ ತಾಂಡ, ಗುಂಡಗತ್ತಿ, ತಲವಾಗಲಿನಲ್ಲಿ ರಸ್ತೆ ಬದಿ ಸಾರ್ವಜನಿಕರು ತಿಪ್ಪೆ ಹಾಕಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತವೆ. ಕೂಡಲೇ ತಿಪ್ಪೆಗಳನ್ನು ತೆರವುಗೊಳಿಸಬೇಕೆಂದು ಪಿಡಿಒಗಳಿಗೆ ಶಾಸಕಿ ಸೂಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳಾದ ಕುಬೇಂದ್ರ ನಾಯ್ಕ, ಜಯಸಿಂಹ, ಸೋಮಶೇಖರ್, ಮಂಜುಳಾ, ಭೀಮಪ್ಪ, ಇಬ್ರಾಹಿಂ, ನಾಗರಾಜ ಇತರರಿದ್ದರು.