ಹನೂರು: ಶಾಲೆಯಲ್ಲಿ ಪ್ರತಿಯೊಬ್ಬರೂ ಆಯಾ ತಿಂಗಳು ನಿಗದಿಪಡಿಸಿರುವ ಕಾರ್ಯ ಚಟುವಟಿಕೆಯನ್ನು ಕೈಗೊಳ್ಳುವುದರ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮ ಪಡಿಸಬೇಕು ಎಂದು ಬಿಇಒ ಗುರುಲಿಂಗಯ್ಯ ತಿಳಿಸಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಕುರಿತು ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಹನೂರು ಶೈಕ್ಷಣಿಕ ವಲಯ ಶೇ.57 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದ್ದು, 2ನೇ ಪರೀಕ್ಷೆಯನ್ನು ಅವಲೋಕಿಸಿದಾಗ ಶೇ.82 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ. ಈಗಾಗಲೇ ಪರೀಕ್ಷೆ 1ರ ಸಾಧಕ, ಬಾಧಕಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಾಗಿದ್ದು, 3ನೇ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಬೇಕು. ಜತೆಗೆ ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಾಗಬೇಕಿದ್ದು, ಪ್ರತಿಯೊಬ್ಬರೂ ಈ ಬಗ್ಗೆ ನಿಗಾ ವಹಿಸಬೇಕು. ಕಾರ್ಯ ಚಟುವಟಿಕೆಗಳನ್ನು ಶಾಲೆಯಲ್ಲಿ ಅನುಷ್ಠಾನಗೊಳಿಸಬೇಕು. ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ವಿಶೇಷ ತರಗತಿ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರ್ತಿಸಿ ಉತ್ತಮ ಅಂಕ ಗಳಿಸಲು ವಿಶೇಷ ಗಮನ ನೀಡಬೇಕು. ಮನೆಮನೆಗೆ ತೆರಳಿ ಪಾಲಕರನ್ನು ಭೇಟಿಯಾಗಿ ಆಪ್ತ ಸಮಾಲೋಚನೆ ನಡೆಸಬೇಕು. ಪಾಲಕರ ಸಭೆ ನಡೆಸಿ ಘಟಕ ಫಲಿತಾಂಶದ ಬಗ್ಗೆ ಚರ್ಚಿಸಬೇಕು. ಅಗತ್ಯ ಮಾರ್ಗದರ್ಶನ ನೀಡಬೇಕು. ತಾಯಂದಿರ ಸಭೆ, ಸಂದರ್ಶನ ಸಪ್ತಾಹ ಆಯೋಜಿಸಬೇಕು. ವಿಷಯವಾರು ಪ್ರಶ್ನೆಕೋಠಿ ತಯಾರಿಸಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಉತ್ತಮ ಅಂಕ ಗಳಿಸಲು ಮಾರ್ಗದರ್ಶನ ನೀಡಬೇಕು. ಆರೋಗ್ಯ ಸಿಂಚನ ಕಾರ್ಯಕ್ರಮದಡಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಬೇಕು. ಈ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸುಧಾರಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಚಿನ್ನಪ್ಪಯ್ಯ ಮಾತನಾಡಿ, ಇಲಾಖೆಯ ನಿರ್ದೇಶನದಂತೆ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್, ಯುವ ಸಂಸತ್ ರಚನೆಯಾಗಬೇಕು. ತಂಬಾಕುಮುಕ್ತ ಪ್ರದೇಶಕ್ಕೆ ಅನುಗುಣವಾಗಿ ಕಾರ್ಯಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಶಾಲಾ ಅವಧಿಯ ನಂತರ ಆವರಣದಲ್ಲಿ ಸಾರ್ವಜನಿಕರಿಂದ ಮದ್ಯ ಸೇವನೆ ಚಟುವಟಿಕೆಗಳನ್ನು ಕಂಡು ಬಂದರೆ ಕೂಡಲೇ ಗಮನಕ್ಕೆ ತರಬೇಕು. ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕ್ರೀಡಾ ಸಂಘಟನೆ, ಕ್ರೀಡಾಕೂಟಗಳ ಆಯೋಜನೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ಮಹೇಶ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಹಾಗೂ ವಿವಿಧ ಶಾಲೆಯ ಮುಖ್ಯ ಶಿಕ್ಷಕರು ಇದ್ದರು.