

ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ ಹಾಗೂ ಎಸ್.ಎಫ್.ಎಸ್. ಪ್ರೌಢ ಶಾಲೆಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಶಾಂತಿಯುತವಾಗಿ ಜರುಗಿತು.
ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಗದ್ಗುರು ಅನ್ನದಾನೀಶ್ವರ ಪ್ರೌಢ ಶಾಲೆಯಲ್ಲಿ ಗಣಿತ ಪರೀಕ್ಷೆಗೆ 211 ಹಾಗೂ ಎಸ್.ಎಫ್.ಎಸ್. ಪ್ರೌಢ ಶಾಲೆಯಲ್ಲಿ 148 ಸೇರಿದಂತೆ ಒಟ್ಟು 359 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 19 ವಿದ್ಯಾರ್ಥಿಗಳು ಗೈರಾಗಿದ್ದರು.
ಕರೊನಾ ಶಂಕಿತರಿಗಾಗಿ ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಪ್ರತ್ಯೇಕ ಪರೀಕ್ಷೆ ಕೇಂದ್ರ ತೆರೆಯಲಾಗಿತ್ತು. ಪರೀಕ್ಷೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಲಾಯಿತು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ ತಾಲೂಕಿನ ಹಳ್ಳಿಗುಡಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಆರಂಭಕ್ಕೂ ಮುನ್ನವೇ ಆವರಣದಲ್ಲಿ ಅಸ್ವಸ್ಥಳಾಗಿ ಕುಸಿದು ಬಿದ್ದಳು. ತಕ್ಷಣ ಸ್ಥಳದಲ್ಲಿದ್ದ ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಅಣ್ಣಿಗೇರಿ ಮತ್ತಿತರರು ಪ್ರಥಮ ಚಿಕಿತ್ಸೆ ಕೊಡಿಸಿ ಪರೀಕ್ಷೆಗೆ ಕಳುಹಿಸಿದರು.