ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

Published on

ಧಾರವಾಡ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದ್ವಿತೀಯ ಪಿಯು ಪರೀಕ್ಷೆ ರದ್ದುಗೊಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಸರಿಯಾಗಿ ಶಾಲೆ ನಡೆಯದ ಸಂದರ್ಭದಲ್ಲಿ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಈ ಚಿಂತೆ ಹೋಗಲಾಡಿಸಲು ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆಸಿದೆ.

ಕರೊನಾ ಕಾರಣಕ್ಕೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಸರಿಯಾಗಿ ನಡೆದಿಲ್ಲ. ಸಂಪೂರ್ಣ ಪಾಠ ಬೋಧನೆಯೂ ಆಗಿಲ್ಲ. ಹೀಗಾಗಿ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿದೆ. ಇದೇ ಕಾರಣಕ್ಕೆ ಸ್ಥಳೀಯವಾಗಿ ಸಮಿತಿ ರಚಿಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ.

ಸಮಿತಿಯಲ್ಲಿ ನುರಿತ ತಜ್ಞರು, ವಿಷಯ ನಿರೀಕ್ಷಕರು, ಪ್ರತಿ ತಾಲೂಕಿನಿಂದ ವಿಷಯವಾರು ಇಬ್ಬರು ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದಾರೆ. ಪ್ರಶ್ನೆ ಪತ್ರಿಕೆ ಯಾವ ರೀತಿ ಇರಬೇಕು? ಮಕ್ಕಳು ಸರಳವಾಗಿ ಪರೀಕ್ಷೆ ಬರೆಯಲು ತಯಾರಿ ನಡೆಸುವುದು ಹೇಗೆ? ಎಂಬ ಸಲಹೆ ಪಡೆಯಲಾಗಿದೆ. ಪರೀಕ್ಷಾ ಮಂಡಳಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಸ್ಥಳೀಯವಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಮಕ್ಕಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ.

ಒಟ್ಟಾರೆ 2 ಪತ್ರಿಕೆಗಳಿಂದ 240 ಅಂಕಗಳಿಗೆ ಪರೀಕ್ಷೆ ನಡೆಸುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಮೊದಲು ಪ್ರಮುಖ ವಿಷಯ, ಭಾಷಾ ವಿಷಯಗಳ ಮೇಲೆ ಪೂರ್ವಭಾವಿ ಪರೀಕ್ಷೆಗಳನ್ನು ಆನ್​ಲೈನ್ ಮೂಲಕ ನಡೆಸಲಾಗುತ್ತದೆ. ಇದರಿಂದ ಯಾವ ರೀತಿ ಪರೀಕ್ಷೆ ನಡೆಯಲಿದೆ ಹಾಗೂ ಯಾವ ಬಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬ ಸಂಶಯ ಹೋಗಲಾಡಿಸುವ ಪ್ರಯತ್ನ ನಡೆದಿದೆ.

161 ಕೇಂದ್ರಗಳ ಸ್ಥಾಪನೆ

ಜಿಲ್ಲೆಯಲ್ಲಿ ಈ ಬಾರಿ 26,602 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 161 ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಒಂದು ಬ್ಲಾಕ್​ನಲ್ಲಿ 12 ಮಕ್ಕಳು ಮಾತ್ರ ಕುಳಿತು ಪರೀಕ್ಷೆ ಬರೆಯಲಿದ್ದಾರೆ. ಉಳಿದಂತೆ ಕಳೆದ ವರ್ಷದಂತೆ ಮಾಸ್ಕ್, ಸ್ಯಾನಿಟೈಸರ್, ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ಸಹ ಮಾಡಲಾಗಿದೆ.

ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ಸ್ಥಳೀಯವಾಗಿ ಸಹ ಸಮಿತಿ ರಚಿಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಶಿಕ್ಷಕರು, ತಜ್ಞರಿಂದ ಸಲಹೆ ಪಡೆಯಲಾಗುತ್ತಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾದರಿ ಪ್ರಶ್ನೆ ಪತ್ರಿಕೆ ನೀಡಿದ ಬಳಿಕ ಸ್ಥಳೀಯ ಪತ್ರಿಕೆಗಳನ್ನು ಸಿದ್ಧಪಡಿಸಲಾಗುವುದು.| ಮೋಹನಕುಮಾರ ಹಂಚಾಟೆ, ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net